ವಕೀಲರ ವಾಹಿನಿ ದ್ವಿಭಾಷಾ ಮಾಸ ಪತ್ರಿಕೆ ಕೊಡಮಾಡುವ 2024ನೇ ಸಾಲಿನ ‘ವಕೀಲ ಭೂಷಣ’ ಪ್ರಶಸ್ತಿಗೆ ಹೈಕೋರ್ಟ್‌ನ ಐವರು ಹಿರಿಯ ವಕೀಲರನ್ನು ಆಯ್ಕೆ ಮಾಡಲಾಗಿದೆ.
ಪ್ರಾಧ್ಯಾಪಕರೂ ಆದ ಹಿರಿಯ ವಕೀಲ ಸಿ ಎಂ ನಾಗಭೂಷಣ, ವಕೀಲ ಸಿ ಎಚ್ ಹನುಮಂತರಾಯ, ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ ಎನ್ ಸುಬ್ಬಾರೆಡ್ಡಿ, ಆಲ್ ಇಂಡಿಯಾ ಫೆಡರೇಶನ್ ಆಫ್ ವುಮೆನ್ ಲಾಯರ್ಸ್ ಅಧ್ಯಕ್ಷೆ ಹೇಮಲತಾ ಮಹಿಷಿ, ಹಿರಿಯ ವಕೀಲರು ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್ ಕಾಂತರಾಜ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಹಿರಿಯ ವಕೀಲ ಉದಯ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ಈ ಆಯ್ಕೆ ಮಾಡಿದೆ ಎಂದು ‘ವಕೀಲರ ವಾಹಿನಿ’ ಸಂಪಾದಕ ಡಿ ಎಂ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ವಕೀಲರ ದಿನಾಚರಣೆ’ ಹಿನ್ನೆಲೆಯಲ್ಲಿ ಡಿಸೆಂಬರ್ 18ರಂದು ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿರುವ ಎನ್‌ಜಿಒ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ಸಮಾರಂಭದಲ್ಲಿ ‘ವಕೀಲರ ವಾಹಿನಿ’ ವಿಶೇಷ ಸಂಚಿಕೆಯನ್ನು ಅಡ್ವೊಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ ಲೋಕಾರ್ಪಣೆ ಮಾಡಲಿದ್ದಾರೆ. ಉದಯ ಹೊಳ್ಳ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.