ಮನೆ ರಾಜ್ಯ ಐವರು ರಾಜ್ಯ ಸರ್ಕಾರದ ವಕ್ತಾರರ ನೇಮಕ: ವಿಪಕ್ಷ ನಾಯಕ ಆರ್ ಅಶೋಕ ಕಿಡಿ

ಐವರು ರಾಜ್ಯ ಸರ್ಕಾರದ ವಕ್ತಾರರ ನೇಮಕ: ವಿಪಕ್ಷ ನಾಯಕ ಆರ್ ಅಶೋಕ ಕಿಡಿ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ರಾಜ್ಯದ ಜನರ ಮುಂದಿಡಲು ಸಂಪುಟದ ಐವರು ಸಚಿವರನ್ನು ಸರ್ಕಾರದ ವಕ್ತಾರರನ್ನಾಗಿ ಬುಧವಾರ ನೇಮಿಸಿದ್ದಾರೆ.

ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ ಮತ್ತು ಸಂತೋಷ್ ಲಾಡ್ ಅವರನ್ನು ವಕ್ತಾರರನ್ನಾಗಿ ನೇಮಿಸಲಾಗಿದೆ.

ಸಿದ್ದರಾಮಯ್ಯ ಅವರ ನಡೆಗೆ ಪ್ರತಿಕ್ರಿಯಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ, ‘ಸಚಿವ ಸಂಪುಟದ 34 ಸಚಿವರ ಪೈಕಿ ಕೇವಲ 5 ಜನ ಸಚಿವರು ಸರ್ಕಾರದ ಅಧಿಕೃತ ವಕ್ತಾರರಾದರೆ, ಉಳಿದ ಸಚಿವರು ಸರ್ಕಾರವನ್ನು ಪ್ರತಿನಿಧಿಸಲು ಅಸಮರ್ಥರು ಎಂಬುದು ತಮ್ಮ ಅಭಿಪ್ರಾಯವೇ ಸಿಎಂ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು, ಈ ಪಟ್ಟಿಯಲ್ಲಿರುವ ವಕ್ತಾರರ ಪೈಕಿ ಓರ್ವ ಸಚಿವ ಮಹಾಶಯರಿಂದಲೇ ತಮ್ಮ ಸರ್ಕಾರ ಅತ್ಯಂತ ಮುಜುಗರಕ್ಕೆ ಒಳಗಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣದಲ್ಲಿ ಮಾಧ್ಯಮಗಳ ಮೇಲೆ ಸುಳ್ಳು ಆರೋಪ ಮಾಡಿ, ಮಾಧ್ಯಮಗಳನ್ನು ಪದೇ ಪದೆ ನಿಂದನೆ ಮಾಡಿ ಸತ್ಯವನ್ನು ತಿರುಚಲು ಶ್ರಮಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಇದು ತಾವು ನೀಡುತ್ತಿರುವ ಬಹುಮಾನವೇ? ಎಂದು ಕಿಡಿಕಾರಿದ್ದಾರೆ.