ಬೆಂಗಳೂರು: ಜೂನ್ ತಿಂಗಳಲ್ಲಿ ಮುಂಗಾರು ಮಳೆ ವಿಳಂಬವಾಗಿ ಈಗ ಜುಲೈ ತಿಂಗಳಲ್ಲಿ ಮಳೆ ಸತತವಾಗಿ ಸುರಿಯುತ್ತಿದೆ. ಹಲವು ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪ, ಪ್ರವಾಹಗಳು ಉಂಟಾಗಿವೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಒಂದೆಡೆ ರಾಜ್ಯದಲ್ಲಿ ಪ್ರವಾಹ ಮತ್ತು ಮತ್ತೊಂದೆಡೆ ಬರ ಎದುರಿಸುವ ಸವಾಲುಗಳಿವೆ. 14 ಜಿಲ್ಲೆಗಳ ಕೆಲವು ಭಾಗಗಳಲ್ಲಿ ಕೊರತೆ ಮಳೆ ದಾಖಲಾಗಿದ್ದರೆ, 13 ಜಿಲ್ಲೆಗಳ ಕೆಲವು ಭಾಗಗಳಲ್ಲಿ ಈಗ ಭಾರೀ ಮಳೆಯಾಗುತ್ತಿದೆ.
ಇಂದು ಡಿಸಿಗಳ ಜೊತೆ ವಿಡಿಯೊ ಕಾನ್ಫರೆನ್ಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬುಧವಾರ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಳೆ ಸಂಬಂಧಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಇಂದು ಸಂಜೆ 4ಗಂಟೆಗೆ ಸಿಎಂ ಮಳೆ ಸಂಬಂಧ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲಿದ್ದಾರೆ. ಬಳಿಕ ಮುಂದಿನ ಕ್ರಮದ ಬಗ್ಗೆ ತಿಳಿಸಲಿದ್ದಾರೆ.
ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಕೊಡಗು, ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ವಿಜಯನಗರದಲ್ಲಿ ಜೂನ್ 1 ರಿಂದ ಮಳೆ ಕೊರತೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದ್ದರೂ. ಜುಲೈ 24 ರವರೆಗೆ ನೈಋತ್ಯ ಮಾನ್ಸೂನ್ ಈ ಜಿಲ್ಲೆಗಳ ಕೆಲವು ಭಾಗಗಳು ಈಗ ಭಾರೀ ಮಳೆಗೆ ಸಾಕ್ಷಿಯಾಗುತ್ತಿವೆ. ಆದಾಗ್ಯೂ, ಈ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಕೊರತೆ ಮಳೆ ದಾಖಲಾಗಿದೆ, ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರಕ್ಕೆ ಕಠಿಣವಾಗಿದೆ.
ಭಾರತೀಯ ಹವಾಮಾನ ಇಲಾಖೆ ಕರ್ನಾಟಕದ ಕರಾವಳಿ ಮತ್ತು ಉತ್ತರ-ಆಂತರಿಕ ಭಾಗಗಳಲ್ಲಿ ಸಂಭಾವ್ಯ ಹಠಾತ್ ಪ್ರವಾಹದ ಎಚ್ಚರಿಕೆಯನ್ನು ನೀಡಿದೆ. ರಾಜ್ಯ ಸರ್ಕಾರವು ಅಪಾಯ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದೆ. ಮಳೆ ಸಂಬಂಧಿತ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
ಅಂಕಿಅಂಶಗಳ ಪ್ರಕಾರ ರಾಜ್ಯದ 13 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರಿಗೆ ರೆಡ್ ಅಲರ್ಟ್ ಘೋಷಿಸಿದ್ದರೆ, ಬೆಳಗಾವಿ, ಕೊಡಗು ಮತ್ತು ಶಿವಮೊಗ್ಗದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೀದರ್, ಬಾಗಲಕೋಟೆ, ಕಲಬುರಗಿ, ವಿಜಯಪುರ, ಬಳ್ಳಾರಿ ಮತ್ತು ಹಾಸನದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಪರಿಸ್ಥಿತಿ ಸವಾಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 500ಕ್ಕೂ ಹೆಚ್ಚು ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಅದನ್ನು ನಿಭಾಯಿಸಲು ಕ್ರಮ ಕೈಗೊಳ್ಳಲಾಗಿದೆ. ಅದೇ ಸಮಯದಲ್ಲಿ, ಕೆಲವು ಜಿಲ್ಲೆಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಚಾಲ್ತಿಯಲ್ಲಿದೆ ಎಂದು ಅವರು ಹೇಳಿದರು.
ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದ ಮಾಜಿ ಕುಲಸಚಿವ ಪ್ರೊ.ಎಂ.ಬಿ.ರಾಜೇಗೌಡ, ದಕ್ಷಿಣ ಒಳನಾಡು ಕರ್ನಾಟಕ (ಶೇ.1) ಮತ್ತು ಕರಾವಳಿ ಕರ್ನಾಟಕ (ಶೇ.5) ಭಾಗದಲ್ಲಿ ಕೊರತೆ ತಗ್ಗಿದ್ದರೆ, ಮಲೆನಾಡಿನಲ್ಲಿ (ಶೇ.25) ಹೆಚ್ಚು. ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಾಗಿದೆ. ಜೂನ್‌ನಲ್ಲಿ ಆಗಿರುವ ಮಳೆ ಕೊರತೆಯನ್ನು ಈಗ ಸರಿದೂಗಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಆಗಸ್ಟ್ 1ರ ವರೆಗೆ ಬಿತ್ತನೆ ಮಾಡಬಹುದು ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಸೂಚನೆ ಪಾಲಿಸಿ: ಹೇಳಿಕೇಳಿ ಈಗ ಭಾರೀ ಮಳೆ ಪ್ರವಾಹ ಉಂಟಾಗುವ ಸಮಯ. ಅತಿವೃಷ್ಟಿ ಮತ್ತು ಪ್ರವಾಹದ ಮುನ್ಸೂಚನೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈಗಾಗಲೇ ಶಾಲೆ-ಕಾಲೇಜುಗಳಿಗೆ ರಜೆ ಸಾರಿದ್ದಾರೆ. ತಂದೆ-ತಾಯಿಗಳು ಮತ್ತು ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಜಿಲ್ಲಾಧಿಕಾರಿಯವರ ಆದೇಶಗಳನ್ನು ಪಾಲನೆ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಭಾರಿ ಮಳೆಯ ಕಾರಣದಿಂದಾಗಿ ಹಠಾತ್ ಪ್ರವಾಹ ಸಂಭವಿಸಬಹುದೆಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸಂಭವನೀಯ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸರ್ವಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.