ಗುವಾಹಟಿ: ಮಳೆಯ ಪರಿಣಾಮ ಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹ ಮತ್ತು ಭೂಕುಸಿತದಲ್ಲಿ ಐದು ಜನರು ಮೃತಪಟ್ಟಿದ್ದು, 20 ಜಿಲ್ಲೆಗಳ 1.92 ಲಕ್ಷ ಜನರು ತೊಂದರೆಗೀಡಾಗಿದ್ದಾರೆ.
ಮಧ್ಯ ಅಸ್ಸಾಂ ಜಿಲ್ಲೆಗಳಾದ ದಿಮಾ ಹಸಾವೊ, ಹೋಜೈ ಮತ್ತು ದಕ್ಷಿಣ ಅಸ್ಸಾಂನ ಕ್ಯಾಚಾರ್ ಜಿಲ್ಲೆಗಳಲ್ಲಿ ಹೆಚ್ಚು ಹಾನಿಯಾಗಿದೆ. ಮಳೆ ಮತ್ತು ಭೂಕುಸಿತದಿಂದಾಗಿ ಲುಮ್ಡಿಂಗ್-ಬದರ್‌ಪುರ್ ಪರ್ವತ ವಲಯದ ರೈಲು ಮಾರ್ಗಗಳು ಕೊಚ್ಚಿಹೋಗಿವೆ.
ಘಟನೆ ಕುರಿತು ಹೇಳಿಕೆ ನೀಡಿರುವ ಈಶಾನ್ಯ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸವ್ಯಸಾಚಿ ಡಿ, ದಿಮಾ ಹಸಾವೊದಲ್ಲಿನ ಡಿಟೋಕ್ಚೆರಾ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಸುಮಾರು 1,600 ರೈಲ್ವೆ ಪ್ರಯಾಣಿಕರನ್ನು ನಿನ್ನೆಯಿಂದ ರಕ್ಷಿಸಲಾಗಿದೆ. ಅವರನ್ನು ಬದರ್‌ಪುರ್ ಮತ್ತು ಸಿಲ್ಚಾರ್‌ಗೆ ಕಳುಹಿಸಲಾಗಿದೆ.1,600 ಪ್ರಯಾಣಿಕರ ಪೈಕಿ 119 ಜನರನ್ನು ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೋಮವಾರದ ನಿರಂತರ ಮಳೆಯು ಮತ್ತಷ್ಟು ಭೂಕುಸಿತ ಉಂಟುಮಾಡಿದ್ದು, ರಕ್ಷಣಾ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ನಿರಂತರ ಮಳೆಯಿಂದಾಗಿ ಲುಮ್ಡಿಂಗ್-ಬದರ್‌ಪುರ ವಲಯದಲ್ಲಿ ಕನಿಷ್ಠ 53 ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
‘ನ್ಯೂ ಹ್ಯಾಫ್ಲಾಂಗ್ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಖಾಲಿ ಪ್ಯಾಸೆಂಜರ್ ರೈಲು ಬೃಹತ್ ಭೂಕುಸಿತದಿಂದಾಗಿ ಕೊಚ್ಚಿಹೋಗಿದೆ. ಹಾನಿಗೊಳಗಾದ ಮಾರ್ಗಗಳನ್ನು ಮರುಸ್ಥಾಪಿಸಲು ಮತ್ತು ದಕ್ಷಿಣ ಅಸ್ಸಾಂ, ಮಣಿಪುರ, ತ್ರಿಪುರಾ ಮತ್ತು ಮಿಜೋರಾಂಗಳಿಗೆ ರೈಲು ಸೇವೆಗಳನ್ನು ಮರುಪ್ರಾರಂಭಿಸಲು ರೈಲ್ವೆ ಈಗ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಸಂತ್ರಸ್ತರಾದ 32,900 ಕ್ಕೂ ಹೆಚ್ಚು ಜನರಿಗೆ ಬಿಸ್ವನಾಥ್, ದಿಮಾ ಹಸಾವೊ, ಹೊಜೈ, ಕರ್ಬಿ ಅಂಗ್ಲಾಂಗ್ ವೆಸ್ಟ್, ನಾಗಾಂವ್ ಮತ್ತು ಉದಲ್ಗುರಿ ಜಿಲ್ಲೆಗಳಲ್ಲಿ 67 ಪರಿಹಾರ ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ ಎಂದು ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಕ್ಯಾಚಾರ್ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಇಬ್ಬರು ಸಾವಿಗೀಡಾಗಿದ್ದರೆ, ಶನಿವಾರ ದಿಮಾ ಹಸಾವೊ ಜಿಲ್ಲೆಯಲ್ಲಿ ಭೂಕುಸಿತದಲ್ಲಿ ಮೂವರು ಮೃತಪಟ್ಟಿದ್ದಾರೆ. ಬ್ರಹ್ಮಪುತ್ರ ಮತ್ತು ಕೊಪಿಲಿ ನದಿಗಳು ಕ್ರಮವಾಗಿ ಜೋರ್ಹತ್ ಮತ್ತು ನಾಗಾಂವ್ ಜಿಲ್ಲೆಗಳ ನೇಮತಿಘಾಟ್ ಮತ್ತು ಕಂಪುರದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.