ಗದಗ : ಲಕ್ಕುಂಡಿಯಲ್ಲಿ ಇಂದು 15ನೇ ದಿನದ ಉತ್ಖನನ ಕಾರ್ಯ ಭರದಿಂದ ಸಾಗಿದೆ. ಲಕ್ಕುಂಡಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಕುಂಬಾರೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಮನೆಗಳ ಸ್ಥಳಾಂತರಿಸುವಂತೆ ಸೂಚಿಸಿದರು. ಗುಪ್ತ ನಿಧಿ ಪತ್ತೆ ಹಾಗೂ ಉತ್ಖನನ ನಡೆಯುತ್ತಿರುವ ಬೆನ್ನಲ್ಲೇ ಲಕ್ಕುಂಡಿ ಅಭಿವೃದ್ಧಿಗೆ ವಿದೇಶದ ಸರ್ಕಾರೇತರ ಸಂಸ್ಥೆ ಆಸಕ್ತಿ ತೋರಿಸಿದೆ.
ಡೆಕ್ಕನ್ ಹೆರಿಟೇಜ್ ಫೌಂಡೇಶನ್ ತಂಡ ಲಕ್ಕುಂಡಿಗೆ ಭೇಟಿ ನೀಡಿ ಅನೇಕ ದೇವಸ್ಥಾನ ಹಾಗೂ ಪ್ರಾಚ್ಯಾವಶೇಷಗಳ ಬಯಲು ವಸ್ತು ಸಂಗ್ರಹಾಲಯ ವೀಕ್ಷಣೆ ಮಾಡಿದರು. ಇಟಲಿ ಹಾಗೂ ಗ್ರೀಸ್ ದೇಶದ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಮುಖ್ಯಸ್ಥರಾದ ಡಾ. ಹೆಲೆನ್ ಡಾ. ಸ್ಟೆಫೆನ್, ಡಾ. ಅಲೆಕ್ಸಾಂಡರ್, ವೈಶಾಖ ಹಾಗೂ ಚಿರಣ್ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿತು.

ಲಕ್ಕುಂಡಿಯಲ್ಲಿ ಸಿಕ್ಕ ಪ್ರಾಚ್ಯಾವಶೇಷಗಳನ್ನು ಸಂಗ್ರಹಣೆ ಮಾಡಿ ಸುಮಾರು 3 ಎಕರೆ ಜಾಗೆಯಲ್ಲಿಟ್ಟು ಬಯಲು ವಸ್ತು ಸಂಗ್ರಹಾಲಯ ಮಾಡಲಾಗಿದೆ. ಅದನ್ನು 2.25 ಲಕ್ಷ ರೂಪಾಯಿ ವ್ಯಚ್ಚದಲ್ಲಿ ಅಭಿವೃದ್ಧಿಗೆ ಸರ್ಕಾರ ಪ್ಲಾನ್ ಮಾಡಿದೆ. ಸರ್ಕಾರದಿಂದ ಟೆಂಡರ್ ಪಡೆದು ಅಭಿವೃದ್ಧಿ ಪಡೆಸಲು ಈ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಟೀಮ್ ಮುಂದಾಗಿದೆ.
ಶೀಘ್ರದಲ್ಲೇ ಪ್ರೊಜೆಕ್ಟ್ ರಿಪೋರ್ಟ್ ತಯಾರಿಸಿ ನಂತರ ಬಯಲು ವಸ್ತು ಸಂಗ್ರಹಾಲಯ ಹಾಗೂ ಲಕ್ಕುಂಡಿ ಗೈಡ್ ಬುಕ್ ತಯಾರು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಕ್ಕುಂಡಿಯ ಬಗ್ಗೆ ಕನ್ನಡ, ಇಂಗ್ಲೀಷ್‌ನಲ್ಲಿ ಗೈಡ್ ಪುಸ್ತಕ ಸಿದ್ಧವಾಗಲಿದೆ ಅಂತಿದ್ದಾರೆ ಅಧಿಕಾರಿಗಳು. ಲಕ್ಕುಂಡಿ ಐತಿಹಾಸಿಕ ದೇವಸ್ಥಾನ ಹಾಗೂ ಬಾವಿಗಳನ್ನು ಡಿಸಿ, ತಹಶಿಲ್ದಾರ್, ಪುರಾತತ್ವ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉತ್ಖನನ ನಂತರ ಸುಮಾರು 10 ಕೋಟಿ ರೂ. ಅನುದಾನದಲ್ಲಿ ಐತಿಹಾಸಿಕವಾದ ಮತ್ತೆ 5 ದೇವಸ್ಥಾನ, 5 ಬಾವಿಗಳನ್ನು ಹೊಸದಾಗಿ ಜೀರ್ಣೋದ್ಧಾರ ಮಾಡಲು ಚಿಂತನೆ ನಡೆಸಿದ್ದಾರೆ.
ಅದರಲ್ಲಿ ಮುಖ್ಯವಾಗಿ ಚಬ್ಬೇರ ಬಾವಿ, ಚೌಕಿಮಠ, ಮತ್ತು ಬಾವಿ, ಫಕೀರಸ್ವಾಮಿ ಮಠದ ಬಾವಿ, ಕುಂಬಾರೇಶ್ವರ ದೇವಸ್ಥಾನ, ನಾಗನಾಥ ದೇವಾಲಯ, ಮಾಳಿಬಾವಿ ಈಶ್ವರ ದೇವಾಲಯ, ವಿದ್ಯಾಶಂಕರ ಲಿಂಗ ದೇವಸ್ಥಾನ, ಕಲ್ಮಠಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಂಬಾರೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ 26 ಕುಟುಂಬಸ್ಥರಿಗೆ ನಿವೇಶನ ಮಂಜೂರು ಆಗಿವೆ. ಸೂಕ್ತ ಪರಿಹಾರ ನೀಡಿದಲ್ಲಿ ಶಿಫ್ಟ್ ಆಗುವುದಾಗಿ ಸ್ಥಳಿಯರು ಹೇಳಿದ್ದಾರೆ. ಮನೆ ಸ್ಥಳಾಂತರಿಸಲು ಡಿಸಿ, ಸಿ.ಎನ್ ಶ್ರೀಧರ್ ಅವರು ಗದಗ ತಹಶಿಲ್ದಾರಗೆ ಸೂಚನೆ ನೀಡಿದರು. ಎಲ್ಲರ ಜೊತೆ ಮತ್ತೊಮ್ಮೆ ಬೈಟೆಕ್ ಮಾಡಿ ಬೇಗ ಸ್ಥಳಾಂತರ ಮಾಡಿಸಿ ಅಂತ ಸೂಚಿಸಿದರು.

ತರ ಮಾಧ್ಯಮಗಳೊಂದಿಗೆ ಜಿಲ್ಲಾಧಿಕಾರಿ ಸಿಎನ್ ಶ್ರೀಧರ್ ಮಾತನಾಡಿ, 2025-26ನೇ ಸಾಲಿನಲ್ಲಿ 10 ಕೋಟಿ ರೂಪಾಯಿ ಹಣ ಲಕ್ಕುಂಡಿ ಅಭಿವೃದ್ಧಿಗೆ ಮೀಸಲಿಟ್ಟಿದ್ದೇವೆ. ಜೀರ್ಣೋದ್ಧಾರಕ್ಕಾಗಿ ಹಳೆಯ ಕಾಲದ ದೇವಸ್ಥಾನ, ಬಾವಿಗಳ ವೀಕ್ಷಣೆಗೆ ಬಂದಿದ್ದೇವೆ. ಲಕ್ಕುಂಡಿಯ ದೇವಸ್ಥಾನಗಳು ಇಂದು ಕರೆಯುತ್ತಿರುವ ಹೆಸರು ಬೇರೆಯಾಗಿದೆ. ಆದರೆ ಶಾಸನಗಳಲ್ಲಿ ಉಲ್ಲೇಖ ಇರುವುದೇ ಬೇರೆಯಾಗಿವೆ ಎಂದರು.
ಲಕ್ಕುಂಡಿ ಮನೆಗಳ ಸ್ಥಳಾಂತರ ಕುರಿತು ಮಾತನಾಡಿ, ಲಕ್ಕುಂಡಿಯ ಜನರನ್ನು ಒಕ್ಕಲು ಎಬ್ಬಿಸುವುದಾದರೆ ಪರಿಹಾರ ಕೊಟ್ಟು ಒಕ್ಕಲೆಬ್ಬಿಸುತ್ತೇವೆ. ಕುಂಬಾರೇಶ್ವರ ದೇವಸ್ಥಾನ ಸುತ್ತಲಿನ ಜನರಿಗೆ ಪರಿಹಾರ ಕೊಡಲಾಗಿದೆ. ಆ ದೇವಸ್ಥಾನ ಸುತ್ತಲಿನ ಜನರಿಗೆ ಶೀಘ್ರದಲ್ಲೇ ಖಾಲಿ ಮಾಡಿಸಲು ಕ್ರಮ ಕೈಗೊಳ್ಳುತ್ತೇವೆ. ಎಲ್ಲಾ ಮನೆಗಳ ಸ್ಥಳಾಂತರ ಬಗ್ಗೆ ಕಾಲ ನಿರ್ಧಾರ ಮಾಡುತ್ತದೆ ಎಂದರು.















