ಚಿಕ್ಕಮಗಳೂರು: ಚಿಕ್ಕಮಗಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿನ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾ ಬುಡನ್ಸ್ವಾಮಿ ದರ್ಗಾ, ಚಂದ್ರದ್ರೋಣ ಪರ್ವತದ ಸುತ್ತಮುತ್ತ ನಿರ್ಮಾಣವಾಗಿರುವ ಹೋಂಸ್ಟೇ, ರೆಸಾರ್ಟ್ ಮಾಲಿಕರು ತಮ್ಮ ಹೋಂಸ್ಟೇಗೆ ಸಂಬಂಧಿಸಿದ ಕಂದಾಯ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸುವಂತೆ ಡಿಎಫ್ಒ ರಮೇಶ್ ಬಾಬು ಅವರು ನೋಟಿಸ್ ಹೊರಡಿಸಿದ್ದಾರೆ.
ಸಾಲು ಸಾಲು ದುರ್ಘಟನೆ ಬಳಿಕ ಎಚ್ಚತ್ತ ಅರಣ್ಯ ಇಲಾಖೆ ಚಿಕ್ಕಮಗಳೂರು ಅರಣ್ಯ ವಲಯದಲ್ಲಿ ನಿರ್ಮಿಸಲಾಗಿರುವ ಅನಧಿಕೃತ ಹೋಂಸ್ಟೇ ಅಥವಾ ರೆಸಾರ್ಟ್ಗಳ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿತ್ತು. ವರದಿ ಸಲ್ಲಿಕೆಯಾದ ಬಳಿಕ ಅರಣ್ಯ ಇಲಾಖೆ 2015ರ ನಂತರ ಅರಣ್ಯ ಒತ್ತುವರಿ ಮಾಡಿ ನಿರ್ಮಿಸಿರುವ ರೆಸಾರ್ಟ್ ಅಥವಾ ಹೋಂಸ್ಟೇ, ತೋಟ, ಬಡವಾಣೆಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡುವಂತೆ ಸೂಚನೆ ನೀಡಿತ್ತು.
ಇದೀಗ, ಅನಧೀಕೃತವಾಗಿ ನಡೆಯುತ್ತಿರುವ ರೆಸಾರ್ಟ್ ಅಥವಾ ಹೋಂಸ್ಟೇಗಳನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ಮುಂದಾಗಿದೆ. ಹೀಗಾಗಿ ಚಿಕ್ಕಮಗಳೂರು ಅರಣ್ಯ ವಲಯದಲ್ಲಿ ನಿರ್ಮಾಣ ಮಾಡಿರುವ ಎಲ್ಲ ಹೋಂಸ್ಟೇ ಮಾಲಿಕರು ಕಂದಾಯ ದಾಖಲಾತಿಗಳನ್ನು ಸಲ್ಲಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.