ಮನೆ ರಾಜ್ಯ ಶ್ರೀನಿವಾಸಪುರ ಸುತ್ತಮುತ್ತ ಅರಣ್ಯ ಒತ್ತುವರಿ ಪ್ರಕರಣ: ಕಾನೂನು ಚೌಕಟ್ಟಿನಲ್ಲಿ ಕ್ರಮ- ಈಶ್ವರ ಖಂಡ್ರೆ

ಶ್ರೀನಿವಾಸಪುರ ಸುತ್ತಮುತ್ತ ಅರಣ್ಯ ಒತ್ತುವರಿ ಪ್ರಕರಣ: ಕಾನೂನು ಚೌಕಟ್ಟಿನಲ್ಲಿ ಕ್ರಮ- ಈಶ್ವರ ಖಂಡ್ರೆ

0

ಬೆಂಗಳೂರು: ಯಾರೇ ಅರಣ್ಯ ಭೂಮಿ ಒತ್ತುವರಿ ಮಾಡಿದ್ದರೂ ನಿಯಮಾನುಸಾರ ಮತ್ತು ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

Join Our Whatsapp Group

ಕೋಲಾರ ಜಿಲ್ಲೆ ಶ್ರೀನಿವಾಸಪುರ ಸುತ್ತಮುತ್ತಲ ಚಿಂತಕುಂಟೆ, ಕೊಳ್ಳೂರು, ಯಲ್ದೂರು, ಕೆ.ಜಿ. ಲಿಂಗರಾಜಪುರ, ಅರಿಕೆರೆ ಮೊದಲಾದ ಕಡೆಗಳಲ್ಲಿ ಅರಣ್ಯ ಭೂಮಿ ಎಂದು ಮ್ಯುಟೇಷನ್ ಆಗಿದ್ದರೂ, ಒತ್ತುವರಿ ತೆರವು ಮಾಡಲು ವಿಳಂಬವೇಕೆ ಎಂದು ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿಗೆ ಪ್ರತಿಕ್ರಿಯಿಸಿರುವ ಸಚಿವರು,  ನೂರಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಅಂದಿನ ಮಹಾರಾಜರು ಈ ಪ್ರದೇಶವನ್ನು ಅರಣ್ಯ ಎಂದು ಅಧಿಸೂಚಿಸಿದ್ದರು, 90ರ ದಶಕದಲ್ಲಿ ಇಲ್ಲಿ ಅರಣ್ಯ ಒತ್ತುವರಿ ಆಗಿದ್ದು, ಒತ್ತುವರಿ ತೆರವಿಗೆ ಅರಣ್ಯ ಇಲಾಖೆ ಕ್ರಮಕೈಗೊಂಡಿದೆ ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು 36 ಪ್ರಕರಣಗಳಲ್ಲಿ 64 ಎ ಅಡಿಯಲ್ಲಿ ಅರಣ್ಯ ಭೂಮಿ ಮರು ವಶಕ್ಕೆ ಆದೇಶ ನೀಡಿದ್ದಾರೆ. 2021-22ರಲ್ಲಿ ಮ್ಯುಟೇಷನ್ ಸಹ ಆಗಿದೆ. ಪ್ರಸ್ತುತ 36 ಪ್ರಕರಣಗಳಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಅರಣ್ಯ ಭೂಮಿ ಮರು ವಶ ವಿಳಂಬವಾಗಿದೆ ಎಂದರು.

ನ್ಯಾಯಾಲಯದಲ್ಲಿರುವ ಪ್ರಕರಣಗಳಲ್ಲಿ ಇಂತಿಷ್ಟೇ ದಿನದಲ್ಲಿ ಕ್ರಮ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಅಲ್ಲಿ ಪ್ರಕ್ರಿಯೆಗಳು ನಡೆಯಬೇಕು. ಆದರೆ ಶೀಘ್ರವೇ ಪ್ರಕರಣದ ವಿಚಾರಣೆ ಮಾಡಿ ಇತ್ಯರ್ಥಗೊಳಿಸಲು ಸೂಚಿಸುವುದಾಗಿ ತಿಳಿಸಿದರು.

ಒತ್ತುವರಿ ಯಾರೇ ಮಾಡಿದ್ದರೂ ತಪ್ಪು. ಅದಕ್ಕೆ ರಾಜಕೀಯ ಲೇಪ ಹಚ್ಚುವುದು ಸರಿಯಲ್ಲ. ಅರಣ್ಯ ಭೂಮಿ ಅಕ್ರಮ ಒತ್ತುವರಿ ಆಗಿದ್ದರೆ ಅದನ್ನು ತೆರವುಗೊಳಿಸಲು ಇಲಾಖೆ ಕಾನೂನು ಚೌಕಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.