ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆ ಹೊಸ ಹುಡ್ಯ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದ ಸರ್ವೇ ನಂಬರ್ 1 ಮತ್ತು 2ರಲ್ಲಿ 61.39 ಎಕರೆ ಒತ್ತುವರಿ ಆಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಡೆಸಲಾಗಿರುವ ಜಂಟಿ ಸರ್ವೇ ಕಾರ್ಯದ ವರದಿಯನ್ನು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ಸಲ್ಲಿಸಿದೆ.
ಶ್ರೀನಿವಾಸಪುರ ತಾಲ್ಲೂಕಿನ ಕುಂದಿಟಿವಾರಪಲ್ಲಿ ನಿವಾಸಿ ಹೈಕೋರ್ಟ್ ವಕೀಲ ಕೆ ವಿ ಶಿವಾರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಅರ್ಜಿದಾರರಿಗೆ ಅರ್ಜಿ ಸಲ್ಲಿಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವುದಕ್ಕೂ ಮುನ್ನ ಎಲ್ಲವೂ ಮುಗಿದಿದೆ. ಪ್ರತಿವಾದಿಯಾಗಿರುವ ರಮೇಶ್ ಕುಮಾರ್ ಜಂಟಿ ಸರ್ವೇ ವರದಿಯನ್ನು ಪ್ರಶ್ನಿಸಬಹುದಾಗಿದೆ” ಎಂದು ತಿಳಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಉದಯ್ ಹೊಳ್ಳ ಅವರು “ಅರ್ಜಿದಾರರು ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ದೂರು ಮತ್ತು ಹೈಕೋರ್ಟ್‌ನ ಸಮನ್ವಯ ಪೀಠದ ಆದೇಶದಂತೆ ಜಿಲ್ಲಾಧಿಕಾರಿ ಮತ್ತು ಅರಣ್ಯ ಇಲಾಖೆಯ ನೇತೃತ್ವದಲ್ಲಿ ಜಂಟಿ ಸರ್ವೇ ಕಾರ್ಯ ಮಾಡುವುದಕ್ಕೆ ಆದೇಶಿಸಲಾಗಿತ್ತು. ಅದರಂತೆ ಸರ್ವೇ ಕಾರ್ಯ ನಡೆಸಿದ್ದು, ಗಡಿಗಳನ್ನು ಗುರುತಿಸಿ ವರದಿಯನ್ನು ಅರಣ್ಯ ಇಲಾಖೆಗೆ ಸಲ್ಲಿಸಲಾಗಿದೆ. ಹೀಗಾಗಿ, ಅರ್ಜಿ ಇತ್ಯರ್ಥಪಡಿಸಬಹುದು” ಎಂದು ತಿಳಿಸಿದರು.
ಇದಕ್ಕೆ ಆಕ್ಷೇಪಿಸಿದ ರಮೇಶ್ ಕುಮಾರ್ ಪರ ವಕೀಲರು “ಅರ್ಜಿದಾರರಿಗೂ ಒತ್ತುವರಿ ಆರೋಪ ಮಾಡಲಾಗಿರುವ ಜಮೀನಿಗೂ ಸಂಬಂಧವಿಲ್ಲ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಅಲ್ಲ. ಅರ್ಜಿದಾರರಿಗೆ ಈ ರೀತಿಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ” ಎಂದರು.
ಇದಕ್ಕೂ ಮುನ್ನ, ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಹೈಕೋರ್ಟ್ ಆದೇಶದ ಅನುಸಾರ ನಡೆಸಲಾದ ಜಂಟಿ ಸರ್ವೇ ಕಾರ್ಯದ ವರದಿಯನ್ನು ಪೀಠಕ್ಕೆ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ಪೀಠವು ಅರ್ಜಿ ವಿಲೇವಾರಿ ಮಾಡಿತು.
ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯವು “ಒತ್ತುವರಿ ಕುರಿತಂತೆ 14 ವರ್ಷದ ಹಿಂದೆಯೇ ಸರ್ವೇ ಕಾರ್ಯ ಕೈಗೊಳ್ಳಲು ಆದೇಶಿಸಲಾಗಿದ್ದರೂ ಅದನ್ನು ಇನ್ನೂ ಕಾರ್ಯಗತಗೊಳಿಸದೇ ಇರುವುದು ಆಘಾತಕಾರಿ ವಿಚಾರ” ಎಂದು ಪೀಠ ಕಳವಳ ವ್ಯಕ್ತಪಡಿಸಿತ್ತು.
“ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಮತ್ತು ಅರಣ್ಯ ಒತ್ತುವರಿ ಆರೋಪ ಎದುರಿಸುತ್ತಿರುವ ಮಾಜಿ ವಿಧಾನಸಭಾಧ್ಯಕ್ಷ ಕೆ ಆರ್ ರಮೇಶ್ ಕುಮಾರ್ ಆಗಲೀ ಅಥವಾ ಅವರ ಅಧಿಕೃತ ಪ್ರತಿನಿಧಿಯಾಗಲೀ ಜಂಟಿ ಸರ್ವೇ ಕಾರ್ಯದಲ್ಲಿ ಭಾಗವಹಿಸಬೇಕು. ಈ ಸಂಬಂಧ ರಮೇಶ್ ಕುಮಾರ್ ಅವರಿಗೆ ಜಿಲ್ಲಾಧಿಕಾರಿ ನೋಟಿಸ್ ಕೊಡಬೇಕು” ಎಂದು ಪೀಠ ಗಡುವು ವಿಧಿಸಿತ್ತು.
“ಒಂದು ವೇಳೆ ರಮೇಶ್ ಕುಮಾರ್ ಆಗಲಿ ಅಥವಾ ಅವರ ಪ್ರತಿನಿಧಿಯಾಗಲೀ ಸರ್ವೇ ಕಾರ್ಯದಲ್ಲಿ ಭಾಗವಹಿಸದೇ ಹೋದಲ್ಲಿ ಸರ್ವೇ ಕಾರ್ಯವನ್ನು ಮುಂದುವರಿಸಬೇಕು. ಅಂತೆಯೇ, ಸರ್ವೇ ನಡೆಸಿದ ನಂತರ ನೀಡಲಾಗುವ ವರದಿಯನ್ನು ಆಕ್ಷೇಪಿಸಲಾಗಲೀ ಅಥವಾ ಸ್ಥಿರಾಸ್ತಿ ಬಾಧ್ಯತೆಯ ಕ್ಲೇಮು ಮಾಡಲು ರಮೇಶ್ ಕುಮಾರ್ ಅವರಿಗೆ ಯಾವುದೇ ಅಧಿಕಾರ ಇರುವುದಿಲ್ಲ” ಎಂದು ಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.