ಕೃಷ್ಣರಾಜಪೇಟೆ: ನಾಗರಹೊಳೆ ಅಭಯಾರಣ್ಯದ ಮೂಲಕ ಹುಣಸೂರು ಮಾರ್ಗವಾಗಿ ಕೃಷ್ಣರಾಜಸಗರ ಜಲಾಶಯದ ಹಿನ್ನೀರಿನ ಮೂಲಕ ಕೆ.ಆರ್.ಪೇಟೆ ತಾಲೂಕಿನ ಹೆರಗನಹಳ್ಳಿ-ಬಸ್ತಿ ಹೊಸಕೋಟೆಗೆ ಲಗ್ಗೆ ಇಟ್ಟಿದ್ದ ಎರಡು ಜೋಡಿ ಸಲಗಗಳು ಇಂದು ಮತ್ತೀಕೆರೆ ಗ್ರಾಮದಲ್ಲಿ ವಿಹರಿಸುತ್ತಿವೆ.
ಕಳೆದ ಐದು ದಿನಗಳಿಂದ ಕೆ.ಆರ್.ಪೇಟೆ ತಾಲೂಕಿನ ಗಡಿ ಗ್ರಾಮಗಳಾದ ಕಬ್ಬಲಗೆರೆಪುರ, ಹೆರಗನಹಳ್ಳಿ ಬಸ್ತಿ ಹೊಸಕೋಟೆ, ವರಹನಾಥಕಲ್ಲಹಳ್ಳಿ, ಕುರುಬಹಳ್ಳಿ ಗ್ರಾಮಗಳ ಮುಳುಗಡೆ ಪ್ರದೇಶಕ್ಕೆ ದಾಂಗುಡಿಯಿಟ್ಟು ಸ್ವೇಚ್ಛೆಯಿಂದ ವಿಹರಿಸುತ್ತಿರುವ ಜೋಡಿ ಸಲಗಗಳನ್ನು ಹಿನ್ನೀರಿನ ಮೂಲಕವೇ ಹುಣಸೂರು ಮಾರ್ಗವಾಗಿ ನಾಗರಹೊಳೆ ಅಭಯಾರಣ್ಯಕ್ಕೆ ವಾಪಸ್ ಕಳಿಸಲು ಕೆ.ಆರ್.ಪೇಟೆ ತಾಲೂಕಿನ ವಲಯ ಅರಣ್ಯಾಧಿಕಾರಿ ಅನಿತಾ ಅವರ ನೇತೃತ್ವದ ತಂಡವು ಇಂದೂ ಕೂಡ ಶತಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ.
ಜನರ ಅಸಹಕಾರದಿಂದ ನಾವು ಏನನ್ನೂ ಮಾಡಲಾಗುತ್ತಿಲ್ಲ, ಗಡಿ ಗ್ರಾಮಗಳ ಸುತ್ತಲೂ ಕೃಷ್ಣರಾಜಸಾಗರದ ಹಿನ್ನೀರು ವ್ಯಾಪಿಸಿರುವುದರಿಂದ ಆನೆಗಳನ್ನು ಹಿಂದಕ್ಕೆ ಓಡಿಸಲು ಕಷ್ಟವಾಗುತ್ತಿದೆ. ಇಂದು ಮತ್ತೀಕೆರೆ ಗ್ರಾಮದ ಹೊರ ವಲಯದ ಜಮೀನು ಹಾಗೂ ತೋಟಗಳಲ್ಲಿ ಆನೆಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ. ಕಬ್ಬು, ಭತ್ತ, ಬಾಳೆ ಸೇರಿದಂತೆ ತೋಟಗಳಿಗೆ ದಾಂಗುಡಿಯಿಡುತ್ತಿರುವ ಆನೆಗಳನ್ನು ನೋಡಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾವು ಆನೆಗಳನ್ನು ಮರಳಿ ಕಾಡಿಗೆ ಕಳುಹಿಸುವ ಕಾರ್ಯಾಚರಣೆಗೆ ಹಿನ್ನಡೆಯಾಗುತ್ತಿದೆ. ಜೋಡಿ ಸಲಗಗಳು ಒಂದಾಗಿರುವುದರಿAದ ತಮ್ಮ ಪಾಡಿಗೆ ತಾವು ವಿಹಾರ ನಡೆಸುತ್ತಿವೆ. ನಾಳಿನ ಕಾರ್ಯಾಚರಣೆಯಲ್ಲಿ ಮುಂದಿನ ನಿಧಾರಗಳ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ವಲಯ ಅರಣ್ಯಾಧಿಕಾರಿ ಅನಿತಾ ತಿಳಿಸಿದರು.