ಮನೆ ರಾಷ್ಟ್ರೀಯ ಒಡಿಶಾದಲ್ಲಿ ಹೊಸ ಸಂಪುಟ ಅಸ್ತಿತ್ವಕ್ಕೆ: 13 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ

ಒಡಿಶಾದಲ್ಲಿ ಹೊಸ ಸಂಪುಟ ಅಸ್ತಿತ್ವಕ್ಕೆ: 13 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ

0

ಭುವನೇಶ್ವರ (Bhubaneswar): ಒಡಿಶಾದಲ್ಲಿ ಹೊಸ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಭಾನುವಾರ 13 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಶನಿವಾರ  ತಮ್ಮ ಸಚಿವ ಸಂಪುಟದ ಎಲ್ಲ 20 ಸಚಿವರ ರಾಜೀನಾಮೆ ಪಡೆದ ಒಂದು ದಿನದ ನಂತರ ಹೊಸ ಸಂಪುಟ ಅಸ್ತಿತ್ವಕ್ಕೆ ಬಂದಿದೆ.

ಇಂದು ಭುವನೇಶ್ವರದ ಲೋಕಸೇವಾ ಭವನದ ನೂತನ ಸಮಾವೇಶ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಡಿ ಶಾಸಕರಾದ ಜಗನ್ನಾಥ್ ಸರಕಾ, ನಿರಂಜನ್ ಪೂಜಾರಿ ಮತ್ತು ಆರ್ ಪಿ ಸ್ವೈನ್ ಸೇರಿದಂತೆ 13 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಗಣೇಶಿ ಲಾಲ್ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ನವೀನ್‌ ಪಟ್ನಾಯಕ್‌ ಅವರು ಮೂವರು ಮಹಿಳಾ ಶಾಸಕರಾದ ಪ್ರಮೀಳಾ ಮಲ್ಲಿಕ್, ಉಷಾದೇವಿ ಮತ್ತು ತುಕುನಿ ಸಾಹು ಅವರನ್ನುಇಂದು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ.

ಬಿಜೆಡಿಯ ಮೂಲಗಳ ಪ್ರಕಾರ, ಸರಕಾ ಒಬ್ಬ ಹೆಸರಾಂತ ಬುಡಕಟ್ಟು ನಾಯಕರಾಗಿದ್ದು ಅವರು ಭಗವಾನ್ ಜಗನ್ನಾಥನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮೊದಲ ವ್ಯಕ್ತಿಯಾಗಿದ್ದಾರೆ.

ಒಡಿಶಾ ವಿಧಾನಸಭೆಯ ಸ್ಪೀಕರ್ ಎಸ್ ಎನ್ ಪಾತ್ರೋ ಅವರು ಸಹ ಶನಿವಾರ ರಾಜೀನಾಮೆ ನೀಡಿದ್ದಾರೆ. ಆದರೆ ರಾಜೀನಾಮೆಗೆ ಯಾವುದೇ ಕಾರಣವನ್ನು ಉಲ್ಲೇಖಿಸಲಿಲ್ಲ.

2​024ರ ಚುನಾವಣೆಗೆ ಪಕ್ಷ ಬಲಪಡಿಸಲು ನವೀನ್‌ ಪಟ್ನಾಯಕ್‌ ಅವರು ಈ ‘ಕಾಮರಾಜ್‌ ಸೂತ್ರ’ಅನುಸರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.