ಮನೆ ರಾಜಕೀಯ ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂದು ಕಿಡಿಕಾರಿದ ಮಾಜಿ ಬಿಸಿ ನಾಗೇಶ್‌

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂದು ಕಿಡಿಕಾರಿದ ಮಾಜಿ ಬಿಸಿ ನಾಗೇಶ್‌

0

ಬೆಂಗಳೂರು : ಕಾಂಗ್ರೆಸ್‌ನವರಿಗೆ ಮುಸ್ಲಿಮರ ಮತಗಳು ಬೇಕು. ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಎಂದು ಮಾಜಿ ಸಚಿವ ಬಿಸಿ ನಾಗೇಶ್‌ ಕಿಡಿಕಾರಿದ್ದಾರೆ. ಈ ಮೂಲಕ ಪಠ್ಯಪುಸ್ತಕದಿಂದ ಹೆಡ್ಗೇವಾರ್‌, ವೀರ ಸಾವರ್ಕರ್‌, ಚಕ್ರವರ್ತಿ ಸೂಲಿಬೆಲೆ ಪಠ್ಯವನ್ನು ಕಾಂಗ್ರೆಸ್‌ ಸರ್ಕಾರ ಕೈಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Our Whatsapp Group

ಈ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಅವರಿಗೆ ಮುಸ್ಲಿಮರ ಮತಗಳು ಬೇಕು. ಮೂಲತಃ ಸಿದ್ದರಾಮಯ್ಯ ಅವರ ಸರ್ಕಾರ ಹಿಂದೂ ವಿರೋಧಿಯಾಗಿದೆ ಎಂಬುದು ನಮಗೆ ಎಲ್ಲರಿಗೂ ಗೊತ್ತು. ಅವರು ಯಾವತ್ತೂ ಹಿಂದೂ ಪರ ಇಲ್ಲ. ನಾವೂ ನಮ್ಮ ಸಂಸ್ಕೃತಿಯನ್ನು ರಕ್ಷಿಸಲು ಏನೆಲ್ಲಾ ಮಾಡಿದ್ದೇವೆ. ಅದರ ವಿರುದ್ಧ ಅವರು ಖಂಡಿತವಾಗಿಯೂ ಹೋಗುತ್ತಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ನವರು ಮೂರು ಅಂಶಗಳ ಬಗ್ಗೆ ಯಾವಾಗಲೂ ಮಾತನಾಡುತ್ತಿದ್ದರು. ಮುಸ್ಲಿಮರ ಮತಗಳಿಗಾಗಿ ಗೋಹತ್ಯ ನಿಷೇಧ ಕಾಯ್ದೆ ವಾಪಸ್‌ ಪಡೆಯುತ್ತೇವೆ ಎನ್ನುತ್ತಿದ್ದರು. ಹಿಜಾಬ್‌ ನಿಷೇಧ ಕೂಡ ವಾಪಸ್‌ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ಮತಾಂತರ ನಿಷೇಧದ ಬಗ್ಗೆ ಮಾತನಾಡುತ್ತಿದ್ದರು. ಅವರು ಎಲ್ಲ ವಿಷಯಗಳನ್ನು ರಾಜಕೀಯಗೊಳಿಸಿದ್ದು, ಯಾವಾಗಲೂ ದ್ವೇಷದ ರಾಜಕೀಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ ಪಠ್ಯಪುಸ್ತಕ ಪರಿಷ್ಕರಣೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕಕ್ಕೆ ಸೇರಿಸಿದ್ದ ಹಲವು ಪಠ್ಯಗಳನ್ನು ವಾಪಸ್‌ ಪಡೆಯಲು ಕಾಂಗ್ರೆಸ್‌ ಸರ್ಕಾರ ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಚರ್ಚೆಯಾಗಿದ್ದು, ಸಂಪುಟ ಅನುಮೋದನೆ ನೀಡಿದೆ. ಈ ಹಿನ್ನೆಲೆ ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡ್ಗೇವಾರ್‌, ವೀರ ಸಾವರ್ಕರ್‌ ಹಾಗೂ ಚಕ್ರವರ್ತಿ ಸೂಲಿಬೆಲೆ ಬರೆದಿದ್ದ ಪಠ್ಯವನ್ನು ಕೈಬಿಡಲಾಗಿದೆ.

ಶಾಲಾ ಪಠ್ಯದಲ್ಲಿ ಹೆಡ್ಗೆವಾರ್, ಸಾವರ್ಕರ್ ಪಠ್ಯಕ್ಕೆ, ಚಕ್ರವರ್ತಿ ಸೂಲಿಬೆಲೆ ಪಾಠಕ್ಕೆ ಕೊಕ್: ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಸಂಪುಟ ಸಭೆಯ ಬಳಿಕ ಪಠ್ಯಪುಸ್ತಕ ವಿಚಾರವಾಗಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, 6 ರಿಂದ ಹತ್ತನೇ ತರಗತಿಯವರೆಗೆ ಸಮಾಜ ವಿಜ್ಞಾನ ಹಾಗೂ ಕನ್ನಡ ಪಠ್ಯದಲ್ಲಿ ಕೆಲ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಬಿಜೆಪಿ ಅವಧಿಯಲ್ಲಿ ಪರಿಷ್ಕರಣೆ ಮಾಡಿದ ಪಠ್ಯಪುಸ್ತಕ ಈಗಾಗಲೇ ಮಕ್ಕಳ ಕೈಗೆ ಹೋಗಿದೆ. ಮತ್ತೆ ಮುದ್ರಿಸಲು ಆಗಲ್ಲ, ಖರ್ಚು ಜಾಸ್ತಿ ಅಗುತ್ತದೆ. ಈ‌ ಹಿನ್ನೆಲೆ ಪಠ್ಯದಲ್ಲಿ ಯಾವುದು ಅವಶ್ಯಕತೆ ಇಲ್ಲ ಅದನ್ನು ತೆಗೆದಿದ್ದೇವೆ. ಯಾವುದು ಸೇರ್ಪಡೆ ಮಾಡಬೇಕು ಅದನ್ನು ಮಾಡಿದ್ದೇವೆ ಎಂದು‌ ತಿಳಿಸಿದರು.

ಮತಾಂತರ ನಿಷೇಧ ಕಾಯಿದೆಯೂ ವಾಪಸ್‌

ಇನ್ನು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ರದ್ದತಿಗೆ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಅನುಮೋದನೆ ನೀಡಿದೆ. ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ 2022ರ ತಿದ್ದುಪಡಿ ರದ್ದು ಮಾಡಲು ಸಂಪುಟ ನಿರ್ಧಾರ ಕೈಗೊಂಡಿದೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಕುರಿತಾದ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿಯೇ ಮಂಡನೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಸಚಿವರು ಹೇಳಿದರು.