ಸುವರ್ಣ ವಿಧಾನಸೌಧ/ ಬೆಳಗಾವಿ: ತೀವ್ರ ಬರದಿಂದ ಕಂಗೆಟ್ಟಿರುವ ರೈತರ 2 ಲಕ್ಷ ರೂಪಾಯಿ ವರೆಗಿನ ಕೃಷಿ ಸಾಲ ಮನ್ನಾ ಮಾಡಬೇಕು ಹಾಗೂ ರಾಜ್ಯ ಕೃಷಿ ವಲಯವನ್ನು ಬರದ ಸಂಕಷ್ಟದಿಂದ ಪಾರು ಮಾಡಲು ತಕ್ಷಣವೇ 10,000 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪದಲ್ಲಿ ಬರದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸರಕಾರಕ್ಕೆ ಪ್ರಚಾರದ ಮೇಲೆ ಇರುವ ಹುಚ್ಚು ರೈತರ ಬಗ್ಗೆ ಇಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಬರ ಪರಿಸ್ಥಿತಿ ನಿರ್ವಹಣೆ ಬಗ್ಗೆ ಸರಕಾರದ ಅಸಡ್ಡೆ, ನಿರ್ಲಕ್ಷ್ಯ ನನಗೆ ಅಚ್ಚರಿ, ಕಳವಳ ತಂದಿದೆ. ಕಳೆದ ಆರು ತಿಂಗಳಿನಿಂದ ಕೇವಲ ಗ್ಯಾರಂಟಿಗಳ ಬಗ್ಗೆಯೇ ಕೆಲಸ ಮಾಡುತ್ತಿರುವ ಈ ಸರಕಾರ, ಆರ್ಥಿಕ ಹೊರೆಯನ್ನು ತನ್ನ ಮೇಲೆ ಎಳೆದುಕೊಂಡು ರೈತರಿಗೆ ಪ್ರತಿಯೊಂದಕ್ಕೂ ಬರೆ ಎಳೆಯುತ್ತದೆ. ಬೆಳೆನಾಶದಿಂದ ಅತೀವ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರಕಾರ ಸಾಲಮನ್ನಾ ಮೂಲಕ ಸಹಾಯಕ್ಕೆ ಬರಬೇಕು ಎಂದು ಅವರು ಒತ್ತಾಯ ಮಾಡಿದರು.
2001ರಿಂದ ಇಲ್ಲಿಯ ತನಕ ರಾಜ್ಯದಲ್ಲಿ ಬರಗಾಲ ಎದುರಿಸಿದ್ದೇವೆ. ಭಾರೀ ಪ್ರವಾಹ ಸಮಸ್ಯೆಯನ್ನು ಎದುರಿಸಿದ್ದೇವೆ. ಹೊಸ ಸರಕಾರ ಕಾಂಗ್ರೆಸ್ ನಾಯಕತ್ವದಲ್ಲಿ ಬಂದಿದೆ. ಗ್ಯಾರಂಟಿಗಳ ಅನುಷ್ಠಾನಕ್ಕೆ ತರುವ ಭರದಲ್ಲಿ ಉಳಿದ ಕಾರ್ಯಗಳ ಕಡಗಣನೆ ಮಾಡಲಾಗಿದೆ. ಗ್ಯಾರಂಟಿಗಳ ಜಾರಿಗೆ ಹೆಚ್ಚು ಸಮಯ ಕೊಟ್ಟು ಆರ್ಥಿಕ ಹೊರೆ ಅವರೇ ತಂದು ಕೊಂಡಿದ್ದಾರೆ. ಮುಂಗಾರು ಪ್ರಾರಂಭ ಆಗಿದೆ ಅಂತ ರೈತರು ಬಿತ್ತನೆ ಮಾಡಿದ್ದರು. ನಂತರ ಮಳೆ ಕೈ ಕೊಟ್ಟಿದೆ. ಆಗಸ್ಟ್ ತಿಂಗಳಿನಿಂದಲೇ ಈ ವರ್ಷ ಬರಗಾಲದ ಛಾಯೆ ಮೂಡಿದೆ ಎಂದು ಅವರು ಇಡೀ ಬರದ ಚಿತ್ರಣವನ್ನು ಬಿಡಿಸಿಟ್ಟರು.
ಹಣ ಸಾಲದು ಎಂದ ಮಾಜಿ ಸಿಎಂ:
ಜಿಲ್ಲಾಧಿಕಾರಿಗಳ ಪಿಡಿಓ ಅಕೌಂಟ್ ನಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು 800 ಕೋಟಿ ರೂಪಾಯಿ ಇಡಲಾಗಿದೆ. ಕೇಂದ್ರ ಸರಕಾರಕ್ಕೆ ಬರಪೀಡಿತ 216 ತಾಲೂಕುಗಳ ನಷ್ಟದ ಬಗ್ಗೆ ಕೇಂದ್ರಕ್ಕೆ ಮಾಹಿತಿ ಕೊಟ್ಟಿದೆ ಸರಕಾರ. ಸರಕಾರ ಕೊಟ್ಟಿರುವ ಅಂದಾಜಿನ ಪ್ರಕಾರ ರೈತರು ಅನುಭವಿಸಿರುವ ಬೆಳೆ ನಷ್ಟದ 10% ಬೆಳೆ ನಷ್ಟಕ್ಕೂ ಪರಿಹಾರ ಕೊಡಲು ಆಗುವುದಿಲ್ಲ. ಹೀಗಾಗಿ ರೈತರು ಸರಕಾರದಿಂದ ನೆರವು ಬಯಸುತ್ತಿದ್ದಾರೆ ಎಂದರು ಮಾಜಿ ಮುಖ್ಯಮಂತ್ರಿಗಳು.
ಇವರು ಹಣಕಾಸು ತಜ್ಞರು. ಸಾಕಷ್ಟು ಅನುಭವ ಇರುವವರು. ಹದಿನಾಲ್ಕು ಬಜೆಟ್ ಮಂಡಿಸಿರುವವರು ಎಂದು ಮಾತಿನಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರನ್ನು ಕುಟುಕಿದ ಅವರು; ಇನ್ನೊಬ್ಬರು ಇದ್ದಾರೆ. ‘ಬೈ ಬರ್ತ್ ಫಾರ್ಮರ್, ಬೈ ಪ್ರೊಫೆಷನ್ ಬಿಸ್ನೆಸ್ ಮ್ಯಾನ್, ಬೈ ಪ್ಯಾಷನ್ ಪೊಲಿಟಿಷಿಯನ್ ‘ ಎಂದು ಅನೇಕ ಬಾರಿ ಹೇಳಿದ್ದಾರೆ. ಇಷ್ಟೊಂದು ಅನುಭವ ಇರುವವರು ಇದ್ದರೂ ಹೀಗ್ಯಾಕೆ ಆಗುತ್ತಿದೆ ಎಂದು ಅವರು ಸಿಎಂ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಕೊಬರಿ ಖರೀದಿ ಕೇಂದ್ರ ಪುನಾರಂಭ ಮಾಡಲು ಆಗ್ರಹ:
ಕೊಬರಿ ಬೆಳೆಗಾರರ ಸಂಕಷ್ಟವನ್ನು ಸದನದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟ ಕುಮಾರಸ್ವಾಮಿ ಅವರು; ರೈತರನ್ನು ಉಳಿಸಲು ಕೂಡಲೇ ಕೊಬರಿ ಖರೀದಿ ಕೇಂದ್ರಗಳನ್ನು ಮರು ಆರಂಭ ಮಾಡಬೇಕು ಎಂದು ಆಗ್ರಹಪಡಿಸಿದರು.
ಕೊಬರಿ ಬೆಲೆ ಹಿಂದೆ ಕ್ವಿಂಟಾಲ್ ಗೆ 18,000 ರೂಪಾಯಿ ಬೆಲೆ ಇತ್ತು, ಈಗ 7,500 ರೂಪಾಯಿಗೆ ಬಂದಿದೆ, ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ, ನಾಫೆಡ್ ಗೆ ಎಷ್ಟ್ ಪತ್ರ ಬರೆದರೂ ಉಪಯೋಗ ಇಲ್ಲದಾಗಿದೆ. ಕೇಂದ್ರದ ಅಧಿಕಾರಿಗಳ ಜತೆ ಕೂಡ ಮಾತನಾಡಿದ್ದೇನೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹಿಂದೆ ಖರೀದಿ ಕೇಂದ್ರಗಳ ಮೂಲಕ ನಾಫೆಡ್ ಪ್ರತಿ ಕ್ವಿಂಟಲ್ ಗೆ 11,750 ರೂಪಾಯಿ ಕೊಟ್ಟು ಕೊಬರಿ ಖರೀದಿ ಮಾಡಿತ್ತು. ಅಂದಾಜು ಒಟ್ಟು 50,000 ಮೆಟ್ರಿಕ್ ಟನ್ ಕೊಬರಿ ಖರೀದಿಗೆ 580 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಕೆಲ ದಿನಗಳ ನಂತರ ಖರೀದಿ ಕೇಂದ್ರಗಳು ಸ್ಥಗಿತವಾದವು. ಕೊಬರಿ ದರವೂ 7500 ರೂಪಾಯಿಗೆ ಕುಸಿಯಿತು. ನಾಫೆಡ್ ಅಂದು ಕ್ವಿಂಟಾಲ್ ಕೊಬರಿಯನ್ನು 11,750 ರೂಪಾಯಿಗೆ ಖರೀದಿ ಮಾಡಿದ್ದು, ಈಗ ಅದನ್ನು ಖಾಸಗಿ ಎಣ್ಣೆ ಕಂಪನಿಗಳಿಗೆ 7,500 ರೂಪಾಯಿಗೆ ಮಾರಾಟ ಮಾಡುತ್ತಿದೆ. ಅವರಿಗೆ 200 ಕೋಟಿ ನಷ್ಟ ಆಗುತ್ತಿದೆ, ಅದೇನು ದೊಡ್ಡ ವಿಷಯ ಅಲ್ಲ, ಭರಿಸಬಹುದು ಎಂದು ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.
ನಾನು ಕೂಡ ತೆಂಗು ಬೆಳೆಗಾರ. ಸುಮಾರು ಒಂದೂವರೆ ಲಕ್ಷ ದಷ್ಟು ಕೊಬರಿಯನ್ನು ಒಂದೂವರೆ ವರ್ಷದಿಂದ ಮಾರಾಟ ಮಾಡಲಾಗದೆ ಹಾಗೆಯೇ ಇಟ್ಟಿದ್ದೇನೆ. ಬೆಳೆಗಾರನಿಗೆ ಎಷ್ಟು ಕಷ್ಟ ಇದೆ ಎಂದು ನನಗೆ ಸ್ವತಃ ಗೊತ್ತು. ಆದರೆ, ಸರಕಾರಗಳ ಚೌಕಾಸಿ ನೋಡಿದರೆ ಬಹಳ ನೋವಾಗುತ್ತದೆ. ಈ ಖರೀದಿ ಯಾವ ಲೆಕ್ಕ? ಇಷ್ಟು ಲಕ್ಷದ ಕೋಟಿ ಬಜೆಟ್ ಮಂಡನೆ ಮಾಡುತ್ತವೆ ಸರಕಾರಗಳು. ರೈತನಿಗೆ ಸಣ್ಣ ಪ್ರಮಾಣದ ಬೆಂಬಲ ಬೆಲೆ ನೀಡುವುದಕ್ಕೆ ಇಷ್ಟು ಮೀನಾಮೇಷ ಏಕೆ? ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು.
ಪ್ರಚಾರದ ಮೇಲೆ ಅಕ್ಕರೆ, ರೈತರ ಬಗ್ಗೆ ಅಸಡ್ಡೆ:
ರಾಜ್ಯ ಕಾಂಗ್ರೆಸ್ ಸರಕಾರ ಪ್ರಚಾರಕ್ಕೆ ಕೊಡುವಷ್ಟು ಮಹತ್ವ ರೈತರ ಬಗ್ಗೆ ನೀಡುತ್ತಿಲ್ಲ. ಸಚಿವರೊಬ್ಬರು ಸಿಎಂಗೆ ಪತ್ರ ಬರೆದಿದ್ದಾರೆ, ಪ್ರಚಾರಕ್ಕೆ ಕೊಟ್ಟ ಜಾಹೀರಾತಿನ ಮೊತ್ತ 140 ಕೋಟಿ ರೂಪಾಯಿ ಕೂಡಲೇ ಬಿಡುಗಡೆ ಮಾಡಿ ಎಂದು ಅವರು ಪತ್ರ ಬರೆದಿದ್ದಾರೆ. ಅವರು ರೈತರ ಬಗ್ಗೆ ಇಂಥ ಪತ್ರಗಳನ್ನು ಬರೆದಿದ್ದಾರೆಯೇ? ಎಂದು ಪ್ರಶ್ನಿಸಿದರು ಮಾಜಿ ಮುಖ್ಯಮಂತ್ರಿಗಳು.
ಸಚಿವರಿಗೆ ನಾನು ದೋಷ ಕೊಡುವ ಉದ್ದೇಶದಿಂದ ನಾನು ಈ ಮಾತು ಹೇಳುತ್ತಿಲ್ಲ. ಆದರೆ, ಅವರಿಗೆ ರೈತರಿಗಿಂತ ಪ್ರಚಾರದ ಮೇಲೆ ಮಹತ್ವ ಜಾಸ್ತಿ ಇದ್ದಂತೆ ಕಾಣುತ್ತಿದೆ, ಯಾಕೆ ಹೀಗೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾರಂಟಿ ಕಾರ್ಯಕ್ರಮಗಳಿಗೆ ಕೊಟ್ಟ ಮಹತ್ವ ರೈತರ ನಷ್ಟಗಳಿಗೆ ಯಾಕೆ ಕೊಡಲು ಆಗ್ತಾ ಇಲ್ಲ. ಕೇಂದ್ರದ ವರದಿ ಬಳಿಕ ಬೆಳೆ ಹಾನಿ ಪರಿಹಾರ ಅಂತ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಕಲಬುರಗಿ, ರಾಯಚೂರು ಎಲ್ಲಾ ಕಡೆ ಕೈಗೆ ಬರಬೇಕಿದ್ದ ಬೆಳೆ ಹಾಳಾಗಿದೆ. ಪದೇ ಪದೇ ಕೇಂದ್ರದ ಕಡೆ ಬೆರಳು ತೋರಿಸಲಾಗ್ತಿದೆ. ಕೇಂದ್ರದಿಂದ ಮೊದಲನೆ ಕಂತಿನ ಹಣ ಬಂದಿರಬಹುದು. ಕೇಂದ್ರದ ತಂಡ ಬರ ಅದ್ಯಯನ ಮಾಡುತ್ತಿದ್ದಾಗ ಗದಗ ಜಿಲ್ಲೆಯ ಅಧಿಕಾರಿಗಳು ನಿದ್ದೆ ಮಾಡ್ತಾ ಇದ್ದರು ಎನ್ನುವ ವಿಚಾರ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಆಡಳಿತ ಇಷ್ಟೊಂದು ಜಿಡ್ಡುಗಟ್ಟಿದೆಯೇ? ಎಂದು ಮಾಜಿ ಮುಖ್ಯಮಂತ್ರಿ ಅವರು ಆಕ್ರೋಶ ವ್ಯಕ್ತಪಡಿಸಿದರು.