ಬೆಂಗಳೂರು(Bengaluru): ಪಿಎಸ್ ಐ ಹಗರಣದಲ್ಲಿ ಸರ್ಕಾರದ ಸಚಿವರು ಮಾಜಿ ಮುಖ್ಯಮಂತ್ರಿಗಳ ಮಗ ಭಾಗಿಯಾದ ಆರೋಪ ಕೇಳಿಬರುತ್ತಿದ್ದು, ಗಮನ ಬೇರೆಡೆ ಸೆಳೆಯಲು ಜಮೀರ್ ಅಹ್ಮದ್ ಮನೆ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಪಿಎಸ್‌ಐ ಹಗರಣ ಮತ್ತು ಎಸಿಬಿ ದಾಳಿ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಅವರು, ಪಿಎಸ್‌ಐ ಹಗರಣದಲ್ಲಿ ಸರ್ಕಾರದ ಸಚಿವರು, ಮಾಜಿ ಮುಖ್ಯಮಂತ್ರಿಗಳ ಮಗ ಭಾಗಿಯಾದ ಆರೋಪ ಕೇಳಿಬರುತ್ತಿದ್ದು, ಜನರ ಗಮನ ಬೇರೆಡೆಗೆ ಸೆಳೆಯಲು ನಮ್ಮ ಪಕ್ಷದ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರ ಮನೆ, ಕಚೇರಿಗಳ ಮೇಲೆ ಎಸಿಬಿ ಮೂಲಕ ದಾಳಿ ಮಾಡಿಸಲಾಗಿದೆ. ಇಂತಹ ರಾಜಕೀಯ ಪ್ರೇರಿತ ಎಸಿಬಿ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ನೀಡಿರುವ ವರದಿ ಆಧರಿಸಿ ಶಾಸಕ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಎಸಿಬಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ, ಮಂಗಳವಾರ ನಸುಕಿನಲ್ಲಿ ಐದು ಸ್ಥಳಗಳ ಮೇಲೆ ದಾಳಿಮಾಡಿ, ಶೋಧ ನಡೆಸುತ್ತಿದೆ.