ಮನೆ ರಾಜಕೀಯ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿಡಿದೆದ್ದ ಸ್ವಪಕ್ಷದ ಮುಖಂಡರು: ಉಚ್ಚಾಟನೆಗೆ ಪತ್ರ

ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿಡಿದೆದ್ದ ಸ್ವಪಕ್ಷದ ಮುಖಂಡರು: ಉಚ್ಚಾಟನೆಗೆ ಪತ್ರ

0

ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ್ ಅವರು ಮೈಸೂರು ಕ್ಷೇತ್ರದ ಬಾಕಿ ಉಳಿದ ಅಭಿವೃದ್ಧಿ ಕೆಲಸ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದು, ಸ್ವಪಕ್ಷದ ಕೆಲ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

Join Our Whatsapp Group

ಹಾಲಿ ಸಂಸದರಿಗೆ ಮುಜುಗರ ಆಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಬಸನಗೌಡ ಪಾಟೀಲ್ ಯತ್ನಾಳ್​ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿವೆ.

ಪ್ರತಾಪ್ ಸಿಂಹ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೆಲ ಬಿಜೆಪಿ ಮುಖಂಡರು ಪತ್ರ ಬರೆದು ಪಕ್ಷದಿಂದ ಉಚ್ಛಾಟನೆಗೆ ಆಗ್ರಹಿಸಿದ್ದಾರೆ. ಚಾಮರಾಜ ಕ್ಷೇತ್ರದ ನಿಕಟ ಪೂರ್ವ ಉಪಾಧ್ಯಕ್ಷ ಕುಮಾರ್ ಗೌಡ, ಪರಿಶಿಷ್ಟ ಪಂಗಡಗಳ ಮೋರ್ಚಾದ ಮಾಜಿ ಅಧ್ಯಕ್ಷ ಮೈ.ಕಾ ಪ್ರೇಮ್ ಕುಮಾರ್ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೈಸೂರು ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಮಹದೇವಸ್ವಾಮಿಗೆ ಪತ್ರ ಬರೆದಿದ್ದಾರೆ. ಪ್ರತಾಪ್ ಸಿಂಹ ಹಾಲಿ ಸಂಸದರಿಗೆ ಮುಜುಗರ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿಲ್ಲ. ಕೇವಲ ವರುಣ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿ ಸೋಲಿಗೆ ಕಾರಣರಾದರು. ಪ್ರತಾಪ್ ಸಿಂಹ ಅವರು ವಕ್ಫ್ ವಿಚಾರದಲ್ಲಿ ಪಕ್ಷದ ಬ್ಯಾನರ್ ಅಡಿಯಲ್ಲಿ ಹೋರಾಟ ಮಾಡದೆ ವಿಜಯೇಂದ್ರ ಅವರಿಗೆ ಮುಜುಗರ ಮಾಡಿದ್ದಾರೆ. ಇನ್ನೂ ಅನೇಕ ಕಾರಣ ನೀಡಿ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೈ.ಕಾ ಪ್ರೇಮ್ ಕುಮಾರ್, ಪಕ್ಷಕ್ಕೆ ಮುಜುಗರ ತರುವ ಕೆಲಸವನ್ನ ಸಂಸದ ಪ್ರತಾಪ್ ಸಿಂಹ ಮಾಡುತ್ತಿದ್ದಾರೆ. ಮಾಜಿಯಾದರೂ ಹಾಲಿ ಸಂಸದರಿಗೆ ಮುಜುಗರ ತರುವ ನಿಟ್ಟಿನಲ್ಲಿ ಕೇಂದ್ರದ ಮಂತ್ರಿಗಳ ಭೇಟಿ ಮಾಡುವುದು ನಾನು ಅದು ಮಾಡಿದೆ, ಇದು ಮಾಡಿದೆ ಎಂದು ಹೇಳಿಕೊಂಡು ಹಾಲಿ ಸಂಸದರಿಗೆ ಕೆಲಸವೇ ಗೊತ್ತಿಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಜೊತೆಗೆ ಪಕ್ಷದಲ್ಲಿ ಒಂದು ರೀತಿ ಸೋತು ಮನೆಯಲ್ಲಿ ಕೂತಿದ್ದರೂ ಚಾಲ್ತಿಯಲ್ಲಿರಬೇಕು ಎಂಬ ಭ್ರಮೆಯಲ್ಲಿದ್ದಾರೆ. ಇವರು ಬಿಜೆಪಿ ರಾಜ್ಯಾಧ್ಯಕ್ಷರ ವಿಜಯೇಂದ್ರ ವಿರುದ್ಧ ಇರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲೂ ಹೋಗಿ ಅಲ್ಲೂ ಕಡ್ಡಿ ಅಲ್ಲಾಡಿಸುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು.

ಮೈಸೂರಿನಲ್ಲಿ ಪ್ರಿನ್ಸಸ್ ರಸ್ತೆ ಹೆಸರೇ ಇಲ್ಲ ಅಂತ ಹೇಳುತ್ತಾರೆ. ನಂತರ ಉಲ್ಟಾ ಹೇಳಿಕೆ ನೀಡುತ್ತಾರೆ. ಇವರೊಬ್ಬ ಪತ್ರಕರ್ತರಾಗಿದ್ದೂ ಪ್ರಿನ್ಸಸ್ ರಸ್ತೆ ಹೆಸರು ಇರುವುದು ಗೊತ್ತಿಲ್ಲವಾ ಇವರಿಗೆ. ಜೊತೆಗೆ ಪಾರ್ಟಿಯನ್ನ ಸಾಕಷ್ಟು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಾರೆ. ಪಕ್ಷದ ಕಾರ್ಯಕ್ರಮಗಳಿಗೆ ಆಹ್ವಾನ ಇಲ್ಲದಿದ್ದರೂ ಬಂದು ಬಿಲ್ಡಪ್ ತೆಗೆದುಕೊಳ್ಳುತ್ತಾರೆ. ಇವರ ನಡವಳಿಕೆ ಬಹಳ ಬೇಸರ ತಂದಿದೆ. ಇವರಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆ. ಹಾಗಾಗಿ ಇವರನ್ನ ಪಕ್ಷದಿಂದ ವಜಾ ಮಾಡಬೇಕು ಎಂದು ನಾನು ಬಿಜೆಪಿ ನಗರ ಘಟಕ ಮತ್ತು ಗ್ರಾಮಾಂತರ ಘಟಕ ಅಧ್ಯಕ್ಷ ಇಬ್ಬರಿಗೂ ಮನವಿ ಪತ್ರ ಕೊಟ್ಟಿದ್ದೇನೆ . ಇದರ ಜೊತೆ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೂ ದೂರು ಕೊಡಲು ಹೋಗುತ್ತಿದ್ದೇನೆ ಎಂದು ಮೈ.ಕಾ ಪ್ರೇಮ್ ಕುಮಾರ್ ಹೇಳಿದ್ದಾರೆ.