ಮನೆ ರಾಜ್ಯ ಆಪರೇಷನ್ ಸಿಂಧೂರ್‌ ಕುರಿತು ಮಾಜಿ ಪ್ರಧಾನಿ ದೇವೇಗೌಡ ಅವರಿಂದ ಮೋದಿಗೆ ಪತ್ರ!

ಆಪರೇಷನ್ ಸಿಂಧೂರ್‌ ಕುರಿತು ಮಾಜಿ ಪ್ರಧಾನಿ ದೇವೇಗೌಡ ಅವರಿಂದ ಮೋದಿಗೆ ಪತ್ರ!

0

ಬೆಂಗಳೂರು : ಪಹಲ್ಗಾಮ್‌ ದಾಳಿಗೆ ಭಾರತ ಪಾಕಿಸ್ತಾನದಲ್ಲಿದ್ದ ಉಗ್ರರ ಅಡುಗು ತಾಣಗಳ ಮೇಲೆ ದಾಳಿ ಮಾಡಿ ಪ್ರತೀಕಾರ ತೀರಿಸಿಕೊಂಡಿದೆ. ಭಾರತೀಯ ಸೇನೆ ನಡೆಸಿದ್ದ ಈ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಹೀಗಾಗಿ ಭಾರತ-ಪಾಕ್ ನಡುವಿನ ಉದ್ವಿಗ್ನತೆ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ಮಧ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಪತ್ರ ಬರೆದಿದ್ದು, ಆಪರೇಷನ್ ಸಿಂಧೂರ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿ ವಿದೇಶ ಪ್ರವಾಸ ರದ್ದು ಸೇರಿದಂತೆ ಭಾರತ ಸರ್ಕಾರ ಕೈಗೊಂಡ ಜವಾಬ್ದಾರಿಯುತ ಕ್ರಮಗಳ ಬಗ್ಗೆ ದೇವೇಗೌಡ್ರು, ಪ್ರಶಂಸನೀಯ ಪತ್ರ ಬರೆದಿದ್ದಾರೆ.

ಮೇ 7ರಂದು ಪಹಲ್ಗಾಮ್ ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಗೆ ಭಾರತದ ಪ್ರಬುದ್ಧ ಮತ್ತು ಸಂಯಮದ ಮಿಲಿಟರಿ ಪ್ರತಿಕ್ರಿಯೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ನಾವು, ನಮ್ಮ ದೇಶ ಭಯೋತ್ಪಾದನೆಯೆಂಬ ಅಧರ್ಮದ ವಿರುದ್ಧ ಧರ್ಮ ಯುದ್ಧ ಸಾರಿರುವ ಸಂದರ್ಭದಲ್ಲಿ ಭಗವಂತ ನಿಮ್ಮೊಂದಿಗೆ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

“ಕಳೆದ ಕೆಲವು ವಾರಗಳಿಂದ ಒತ್ತಡ ಹೆಚ್ಚಿದೆ. ಆದರೆ ಆ ಎಲ್ಲಾ ಒತ್ತಡ, ಸಂದರ್ಭಗಳನ್ನು ನಿಭಾಯಿಸಲು ನಿಮ್ಮಲ್ಲಿನ ಆಧ್ಯಾತ್ಮಿಕ ಶಕ್ತಿಯಿಂದ ಸಾಧ್ಯವಾಗಿದೆ, ಉನ್ನತ ಜವಾಬ್ದಾರಿಯನ್ನು ಹೊಂದಿರುವಾಗ ಎಲ್ಲದರಿಂದ ದೂರವಿದ್ದು ಸಮಚಿತ್ತತೆ ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ ಅದು ಅಧ್ಯಾತ್ಮದಿಂದಷ್ಟೇ ಸಾಧ್ಯ. ಕೆಲವು ದಿನಗಳಲ್ಲಿ ಆ ಶಕ್ತಿ ನಿಮ್ಮಲ್ಲಿ ಇದೆ ಎಂಬುದನ್ನು ನೀವು ತೋರಿಸಿದ್ದೀರಿ” ಎಂದು ದೇವೇಗೌಡ ಮೋದಿ ಅವರ ಗಟ್ಟಿ ನಿಲುವುಗಳನ್ನು ಶ್ಲಾಘಿಸಿದ್ದಾರೆ.

“ಸೌದಿ ಅರೇಬಿಯಾ ಭೇಟಿಯಲ್ಲಿದ್ದ ನೀವು ಭಯೋತ್ಪಾದಕ ದಾಳಿ ವಿಷಯ ಗೊತ್ತಾಗುತ್ತದ್ದಂತೆಯೇ ಭೇಟಿಯನ್ನು ಮೊಟಕುಗೊಳಿಸಿ ಕೂಡಲೇ ಸ್ವದೇಶಕ್ಕೆ ವಾಪಸ್ ಬಂದೀರಿ. ತಕ್ಷಣದಿಂದಲೇ ದೇಶದಲ್ಲಿ ಸೃಷ್ಟಿಯಾಗಿದ್ದ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುವುದರ ಜೊತೆಗೆ, ವ್ಯೂಹಾತ್ಮಕ ಸಭೆಗಳನ್ನು ನಡೆಸಿ ಜಾಗತಿಕ ಬೆಂಬಲವನ್ನು ಸಜ್ಜುಗೊಳಿಸಲು ಮಹತ್ವದ ಪಾತ್ರ ವಹಿಸಿದಿರಿ”.

”ಸಶಸ್ತ್ರ ಪಡೆಗಳಿಗೆ ಸ್ಫೂರ್ತಿ ನೀಡಲು ತಾವು ಮೊದಲ ದಿನದಿಂದಲೇ ನೀವು ತೆಗೆದುಕೊಂಡ ದೃಢ ನಿರ್ಧಾರದ ಕ್ರಮಗಳನ್ನು ನಾನು ಗಮನಿಸುತ್ತಿದ್ದೇನೆ. ನಂತರ ನೀವು ಎಲ್ಲಾ ತುರ್ತು ಪರಿಸ್ಥಿತಿಗಳ ಮೇಲ್ವಿಚಾರಣೆ ನಡೆಸಲು ಯುರೋಪ್ ಪ್ರವಾಸವನ್ನು ರದ್ದುಗೊಳಿಸಿದ್ದೀರಿ” ಎಂದು ಮಾಜಿ ಪ್ರಧಾನಿಗಳು ಮೋದಿ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ವಾರಗಳಿಂದ ನೀವು ಬಹಳ ಒತ್ತಡ ಮತ್ತು ಸಂಯಮದಿಂದ ಕರ್ತವ್ಯ ನಿರ್ವಹಿಸುತ್ತಿದ್ದೀರಿ. ದೇವರು ನಿಮಗೆ ದುಷ್ಟರನ್ನು ಹತ್ತಿಕ್ಕುವ ಸರ್ವಶಕ್ತಿಯನ್ನು ನೀಡಲಿ. ದೇಶ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನೂ ನಿವಾರಿಸುವ ಶಕ್ತಿಯೂ ನಿಮಗೆ ಸಿಗಲಿ. ಕಠಿಣ ಸಂದರ್ಭದಲ್ಲಿ ದೇಶದ ನಾಯಕತ್ವ ವಹಿಸಿರುವ ನಿಮ್ಮ ಹೆಸರು ಇತಿಹಾಸದಲ್ಲಿ ಪ್ರಕಾಶಮಾನವಾಗಿ ದಾಖಲಾಗಲಿದೆ ಎಂದು ದೇವೇಗೌಡರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.