ರಾಮನಗರ: ನೈಸ್ ಅಕ್ರಮ ಕುರಿತು ಮೋದಿಗೆ ಹೆಚ್ ಡಿಕೆ ದೂರು ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದ ಡಿ.ಕೆ.ಸುರೇಶ್, ಧಾರಾಳವಾಗಿ ದೂರು ನೀಡಲಿ. ನೈಸ್ ಸಂಸ್ಥೆಗೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಎಂದು ತಿರುಗೇಟು ನೀಡಿದರು.
ಬಿಡದಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರು ಸಿಎಂ ಆಗಿದ್ದ ಕಾಲದಲ್ಲಿ ಅಗ್ರಿಮೆಂಟ್ ಆಗಿತ್ತು. ನೈಸ್ ರಸ್ತೆ ಪರ ಹೋರಾಟ ಮಾಡಿದ್ದು ಅವರೇ, ಈಗ ವಿರೋಧ ಮಾಡ್ತಿರೋದು ಅವರೇ, ರೈತರಿಗೆ ತೊಂದರೆ ಕೊಡ್ತಿರೋರು ಅವರೇ. ಈಗ ಪ್ರಧಾನಮಂತ್ರಿಗಳಿಗೆ ಧಾರಾಳವಾಗಿ ದೂರು ಕೊಡಬಹುದು. ಒಬ್ಬ ಮಾಜಿ ಮುಖ್ಯಮಂತ್ರಿ ಆಗಿ ಅವರು ಏನು ಬೇಕಾದ್ರೂ ಹೇಳಬಹುದು ಎಂದು ಕಿಡಿಕಾರಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ರನ್ನು ಹೆಚ್ ಡಿಕೆ ಟಾರ್ಗೆಟ್ ಮಾಡುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಅವರು ಯಾಕೆ ಟಾರ್ಗೆಟ್ ಮಾಡಿದ್ದಾರೋ ಗೊತ್ತಿಲ್ಲ, ಅವರನ್ನೇ ಕೇಳಿ ಎಂದರು.
I.N.D.I.A ಗೆ ಜೀವದಾನ ಮಾಡಲು ರಾಜ್ಯ ಕಾವೇರಿ ಹಿತ ಬಲಿ ಎಂಬ ಹೆಚ್ಡಿಕೆ ಟ್ವೀಟ್ ಬಗ್ಗೆ ಮಾತನಾಡಿ, ಅದಕ್ಕೆ ರಾಜ್ಯದ ಜನ ಉತ್ತರ ಕೊಡ್ತಾರೆ. ಹೆಚ್ ಡಿಕೆ ಟೀಕೆ ಟಿಪ್ಪಣಿಗಳಿಗೆ ಉತ್ತರ ಕೊಡಲು ಸಮಯವಿಲ್ಲ. ಅವರಿಗೆ ಬಹಳಷ್ಟು ಸಮಯವಿದೆ, ಜನ ರೆಸ್ಟ್ ಕೊಟ್ಟಿದ್ದಾರೆ. ಹಾಗಾಗಿ ಬೇರೆಬೇರೆ ಆಲೋಚನೆಗಳು ಬರ್ತಿವೆ. ಅದನ್ನ ಮಾಧ್ಯಮಗಳ ಮುಂದೆ ಮಾತನಾಡ್ತಾರೆ. ನೀವು ಕೆಲಸ ಮಾಡಿ ಅಂತ ಕಾಂಗ್ರೆಸ್ ಪಕ್ಷಕ್ಕೆ ಜನ ಬೆಂಬಲ ಕೊಟ್ಟಿದ್ದಾರೆ. ರಾಜ್ಯದ ಹಿತ ಕಾಪಾಡಲು ಕುಮಾರಸ್ವಾಮಿ ಸಲಹೆ ಕೊಡಲಿ. ಸಲಹೆ ಸ್ವೀಕರಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಬಿಟ್ಟವರು ಮರಳಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ನನಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾನು ಕೂಡಾ ಮಾಧ್ಯಮಗಳಲ್ಲಿ ಈ ಬಗ್ಗೆ ನೋಡಿದ್ದೇನೆ. ಅದನ್ನ ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ. ಯಾವುದೇ ಷರತ್ತಿಲ್ಲದೇ ಬಂದ್ರೆ ಯಾರನ್ನಾದರೂ ಪಕ್ಷಕ್ಕೆ ಸೇರಿಸಿಕೊಳ್ತೇವೆ. ಅದನ್ನ ಬಿಟ್ಟು ಯಾರನ್ನೂ ಬನ್ನಿ, ಬನ್ನಿ ಅಂತ ಆಹ್ವಾನ ಮಾಡಿಲ್ಲ.ಸ್ವಚ್ಚ ಆಡಳಿತ ಕೊಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡ್ತಿದೆ ಎಂದರು.
ಚನ್ನಪಟ್ಟಣದ ಮಾಜಿ ಶಾಸಕ ಎಂ.ಸಿ.ಅಶ್ವಥ್ ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿ, ಎಂ.ಸಿ.ಅಶ್ವಥ್ ಮತ್ತು ನಾನು ಹಳೇ ಸ್ನೇಹಿತರು. ಹಾಗಾಗಿ ಹಲವು ಬಾರಿ ಭೇಟಿ ಮಾಡಿದ್ದಾರೆ. ಆದರೆ ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ತಿಳಿಸಿದರು.