ಕೋಲ್ಕತ್ತಾ: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲರಾದ ಡಾ.ಸಂದೀಪ್ ಘೋಷ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಸಂಸ್ಥೆಯಲ್ಲಿ ಆರ್ಥಿಕ ಭ್ರಷ್ಟಾಚಾರದಲ್ಲಿ ತೊಡಗಿರುವ ಆರೋಪದ ಮೇಲೆ ಸೋಮವಾರ ಬಂಧಿಸಿದೆ.
ಆರ್.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಹಣಕಾಸು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಿಬಿಐ ಮಾಜಿ ಪ್ರಾಂಶುಪಾಲರನ್ನು ಕಳೆದ ಹದಿನೈದು ದಿನಗಳಿಂದ ವಿಚಾರಣೆ ನಡೆಸಿ ಸೋಮವಾರ ಸಂಜೆ ಬಂಧಿಸಿದೆ ಎನ್ನಲಾಗಿದೆ.
ಸಂದೀಪ್ ಘೋಷ್ ಬಂಧನದ ಬೆನ್ನಲ್ಲೇ ಆರ್‌ಜಿ ಕರ್ ಕಾಲೇಜಿನಲ್ಲಿ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಅಫ್ಸರ್ ಅಲಿ ಖಾನ್ ಹಾಗೂ ಆಸ್ಪತ್ರೆಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಬಿಪ್ಲಬ್ ಸಿಂಗ್ ಮತ್ತು ಸುಮನ್ ಹಜ್ರಾರನ್ನು ಕೂಡ ಸಿಬಿಐ ಬಂಧಿಸಿದೆ.
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಟ್ರೈನಿ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದು ಅತ್ಯಾಚಾರ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಲಾಗುತ್ತಿದೆ. ಇತ್ತ ಪ್ರತಿಭಟನೆಗಳು ಹೆಚ್ಚುತ್ತಿದ್ದಂತೆ ಆರೋಪಿ ಸಂಜಯ್ ರಾಯ್ ನನ್ನು ಪೊಲೀಸರು ಬಂಧಿಸಿದ್ದಾರೆ.