ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆ ಹೊಸ ಹುಡ್ಯ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದ ಸರ್ವೆ ನಂಬರ್ 1 ಮತ್ತು 2ರಲ್ಲಿ 61.39 ಎಕರೆ ಒತ್ತುವರಿ ಆಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಿಗದಿತ ಜಂಟಿ ಸರ್ವೆ ಕಾರ್ಯವನ್ನು ಜನವರಿ 15ರಂದು ನಡೆಸಲೇಬೇಕು ಎಂದು ರಾಜ್ಯ ಅರಣ್ಯ ಇಲಾಖೆಗೆ ಕರ್ನಾಟಕ ಹೈಕೋರ್ಟ್ ತಾಕೀತು ಮಾಡಿದೆ.
ಶ್ರೀನಿವಾಸಪುರ ತಾಲ್ಲೂಕಿನ ಕುಂದಿಟಿವಾರಪಲ್ಲಿ ನಿವಾಸಿಯೂ ಆದ ವಕೀಲ ಕೆ ವಿ ಶಿವಾರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಹಿರಿಯ ವಕೀಲ ವೈ ಆರ್ ಸದಾಶಿವ ರೆಡ್ಡಿ ಅವರ ವಾದ ಮಾನ್ಯ ಮಾಡಿದ ಪೀಠವು “ಈಗಾಗಲೇ ಹೈಕೋರ್ಟ್ ಈ ಮೊದಲು ನೀಡಿರುವ ಆದೇಶದ ಅನುಸಾರ ಜಿಲ್ಲಾಧಿಕಾರಿ, ಭೂ ದಾಖಲೆಗಳ ಉಪ ನಿರ್ದೇಶಕ (ಡಿಡಿಎಲ್‌ಆರ್) ಮತ್ತು ಒತ್ತುವರಿ ಆರೋಪ ಎದುರಿಸುತ್ತಿರುವ ಮಾಜಿ ವಿಧಾನಸಭಾಧ್ಯಕ್ಷ ಕೆ ಆರ್ ರಮೇಶ್ ಕುಮಾರ್ ಆಗಲೀ ಅಥವಾ ಅವರ ಅಧಿಕೃತ ಪ್ರತಿನಿಧಿಯಾಗಲೀ ಜಂಟಿ ಸರ್ವೆ ಕಾರ್ಯದಲ್ಲಿ ಭಾಗವಹಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿ ರಮೇಶ್ ಕುಮಾರ್ ಅವರಿಗೆ ನೋಟಿಸ್ ಕೊಡಬೇಕು” ಎಂದು ಸೂಚಿಸಿದೆ.
“ಒಂದು ವೇಳೆ ರಮೇಶ್ ಕುಮಾರ್ ಆಗಲೀ ಅಥವಾ ಅವರ ಅಧಿಕೃತ ಪ್ರತಿನಿಧಿಯಾಗಲೀ ಸರ್ವೆ ಕಾರ್ಯದಲ್ಲಿ ಭಾಗವಹಿಸದೇ ಹೋದಲ್ಲಿ ಸರ್ವೇ ಕಾರ್ಯವನ್ನು ಮುಂದುವರಿಸಬೇಕು. ಅಂತೆಯೇ, ಸರ್ವೇ ನಡೆಸಿದ ನಂತರ ನೀಡಲಾಗುವ ವರದಿಯನ್ನು ಆಕ್ಷೇಪಿಸಲಾಗಲೀ ಅಥವಾ ಸ್ಥಿರಾಸ್ತಿ ಬಾಧ್ಯತೆಯ ಹಕ್ಕುಸಾಧಿಸಲಾಗಲಿ ರಮೇಶ್ ಕುಮಾರ್ ಅವರಿಗೆ ಯಾವುದೇ ಅಧಿಕಾರ ಇರುವುದಿಲ್ಲ” ಎಂದು ಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
“ಒತ್ತುವರಿ ಕುರಿತಂತೆ 14 ವರ್ಷದ ಹಿಂದೆಯೇ ಸರ್ವೇ ಕಾರ್ಯ ಕೈಗೊಳ್ಳಲು ಆದೇಶಿಸಲಾಗಿದ್ದರೂ ಅದನ್ನು ಇನ್ನೂ ಕಾರ್ಯಗತಗೊಳಿಸದೇ ಇರುವುದು ಆಘಾತಕಾರಿ ವಿಚಾರ” ಎಂದು ಕಳವಳ ವ್ಯಕ್ತಪಡಿಸಿರುವ ಪೀಠವು “ಸರ್ವೇ ಕಾರ್ಯದ ವರದಿಯನ್ನು ಜನವರಿ 30 ಅಥವಾ ಅಷ್ಟರೊಳಗೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಅರಣ್ಯ ಉಪಸಂರಕ್ಷಣಾಧಿಕಾರಿಗೆ (ಡಿಸಿಎಫ್) ನಿರ್ದೇಶಿಸಿದೆ.
“ಅರಣ್ಯ ಜಮೀನು ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪ್ರಾದೇಶಿಕ ಆಯುಕ್ತರು 2024ರ ಡಿಸೆಂಬರ್ 7, 19 ಮತ್ತು 26ರಂದು ಹೊರಡಿಸಿರುವ ಅಧಿಸೂಚನೆಗಳು ಹೈಕೋರ್ಟ್ ಆದೇಶದ ಉಲ್ಲಂಘನೆ” ಎಂದು ಅರ್ಜಿದಾರರು ಆರೋಪಿಸಿದ್ದಾರೆ.














