ಪುಣೆ : ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸುರೇಶ್ ಕಲ್ಮಾಡಿ (81) ಇಂದು (ಮಂಗಳವಾರ) ಮುಂಜಾನೆ ಪುಣೆಯಲ್ಲಿ ನಿಧನರಾದರು. ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಕಲ್ಮಾಡಿ ಬೆಳಗಿನ ಜಾವ 3:30 ರ ಸುಮಾರಿಗೆ ಕೊನೆಯುಸಿರೆಳೆದರು.
ಕಲ್ಮಾಡಿ ಅವರು ಪತ್ನಿ, ಮಗ ಮತ್ತು ಸೊಸೆ, ಇಬ್ಬರು ವಿವಾಹಿತ ಹೆಣ್ಣುಮಕ್ಕಳು, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಕಲ್ಮಾಡಿ ಅವರ ಪಾರ್ಥಿವ ಶರೀರವನ್ನು ಇಲ್ಲಿನ ಎರಾಂಡ್‌ವಾನೆ ಪ್ರದೇಶದಲ್ಲಿರುವ ನಿವಾಸದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಇರಿಸಲಾಗುವುದು. ನಂತರ ನವಿ ಪೇತ್‌ನಲ್ಲಿರುವ ವೈಕುಂಠ ಚಿತಾಗಾರದಲ್ಲಿ ಮಧ್ಯಾಹ್ನ 3:30ಕ್ಕೆ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.
ಮಂಗಳೂರು ಮೂಲದ ಡಾ. ಕೆ. ಶಾಮರಾವ್ ಕಲ್ಮಾಡಿ ಮತ್ತು ಶಾಂತಾ ರಾವ್ ದಂಪತಿಯ ಪುತ್ರನಾಗಿ ಜನಿಸಿದ ಇವರಿಗೆ ಕೊಂಕಣಿ, ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿ ಮತ್ತು ತುಳು ಭಾಷೆಗಳು ಬರುತ್ತಿತ್ತು. 1960 ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಿದ ಇವರು 1964 ಮತ್ತು 1972 ರ ನಡುವೆ ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿ ನೇಮಕಗೊಂಡರು. ನಂತರ 1972 ರಿಂದ 1974 ರವರೆಗೆ NDA ಯ ವಾಯುಪಡೆ ತರಬೇತಿ ತಂಡದಲ್ಲಿ ಬೋಧಕರಾಗಿ ಸ್ಕ್ವಾಡ್ರನ್ ನಾಯಕರಾಗಿ ವಾಯುಸೇನೆಯಿಂದ ನಿವೃತ್ತರಾಗಿದ್ದರು.
1977 ರಲ್ಲಿ ಪುಣೆಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಲ್ಮಾಡಿ 1982 ರಿಂದ 1996 ರವರೆಗೆ ಮೂರು ಅವಧಿಗೆ ಬಳಿಕ 1998 ರಲ್ಲಿ ರಾಜ್ಯಸಭೆಯ ಸದಸ್ಯರಾಗಿದ್ದರು. 1996 ರಲ್ಲಿ ಪುಣೆಯಿಂದ 11 ನೇ ಲೋಕಸಭೆಗೆ ಮತ್ತು 2004 ರಲ್ಲಿ 14 ನೇ ಲೋಕಸಭೆಗೆ ಆಯ್ಕೆಯಾಗಿದ್ದರು.
ಪಿ. ವಿ. ನರಸಿಂಹ ರಾವ್ ಭಾರತದ ಪ್ರಧಾನಿಯಾಗಿದ್ದಾಗ, ಸುರೇಶ್ ಕಲ್ಮಾಡಿ 1995 ರಿಂದ 1996 ರವರೆಗೆ ರೈಲ್ವೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಕಲ್ಮಾಡಿ 1996 ರಿಂದ 2012 ರವರೆಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2000 ರಿಂದ 2013 ರವರೆಗೆ ಏಷ್ಯನ್ ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.















