ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಂಗಾದ ರೆಜಿನಗರ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಬಾಬರಿ ಶೈಲಿಯ ಮಸೀದಿಗೆ ಇಂದು ಶಿಲಾನ್ಯಾಸ ನೆರವೇರಿಸಲು ಟಿಎಂಸಿ ಉಚ್ಛಾಟಿತ ಶಾಸಕ ಹುಮಾಯೂನ್ ಕಬೀರ್ ಸಜ್ಜಾಗಿದ್ದಾರೆ.
ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ವಾರ್ಷಿಕೋತ್ಸವ ದಿನವಾದ ಡಿಸೆಂಬರ್ 6ರಂದು ಕಾರ್ಯಕ್ರಮ ನಡೆಯುತ್ತಿದೆ. ಶಿಲಾನ್ಯಾಸ ಸಮಾರಂಭದ ಹಿನ್ನೆಲೆ ಬೆಲ್ಡಂಗಾದ ರೆಜಿನಗರ ಪ್ರದೇಶವನ್ನ ಸೂಕ್ಷ್ಮ ಪ್ರದೇಶವೆಂದು ಘೋಸಲಾಗಿದ್ದು, ಪೊಲೀಸ್, ಮೀಸಲು ವಾಯುಪಡೆ ಹಾಗೂ ಗಡಿ ಭದ್ರತಾ ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಟಿಎಂಸಿ ಉಚ್ಛಾಟಿತ ಶಾಸಕ ಹುಮಾಯೂನ್ ಕಬೀರ್, ಬಾಬರಿ ಮಸೀದಿ ಧ್ವಂಸ ವಾರ್ಷಿಕೋತ್ಸವ ದಿನದಂದು ಅದೇ ಮಾದರಿಯ ಮಸೀದಿಗೆ ಅಡಿಪಾಯ ಹಾಕುವುದಾಗಿ ಹೇಳಿದ್ದರು. ಅದರಂತೆ ಇಂದು ಸಾಂಕೇತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಹೀಗಾಗಿ ಪ್ರದೇಶದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಭದ್ರತಾಪಡೆಗಳು ಈಗಾಗಲೇ ಗಸ್ತು ಪ್ರಾರಂಭಿಸಿವೆ. ವಿವಿಧ ರಾಜ್ಯಗಳ ಮುಸ್ಲಿಂ ಧರ್ಮಗುರುಗಳು, ಸ್ವಯಂ ಸೇವಕರು ಸೇರಿ 3 ಲಕ್ಷ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಕಬೀರ್ ಹೇಳಿದ್ದಾರೆ. ಸೌದಿ ಅರೇಬಿಯಾದಿಂದ ಇಬ್ಬರು ಖಾಜಿಗಳು ಆಗಮಿಸಲಿದ್ದಾರೆ.
ಜೊತೆಗೆ ಆತಿಥ್ಯಕ್ಕಾಗಿ ʻಶಾಹಿ ಬಿರಿಯಾನಿʼ ತಯಾರಿಸಲಾಗುತ್ತಿದ್ದು, ಅದಕ್ಕಾಗಿ 7 ಕ್ಯಾಟರಿಂಗ್‌ಗಳಿಗೆ ನಿರ್ವಹಣೆ ವಹಿಸಲಾಗಿದೆ. ಅತಿಥಿಗಳಿಗಾಗಿ ಸುಮಾರು 40,000 ಪ್ಯಾಕೆಟ್ ಬಿರಿಯಾನಿ, ಸ್ಥಳೀಯ ನಿವಾಸಿಗಳಿಗೆ 20,000 ಪ್ಯಾಕೆಟ್ ಬಿರಿಯಾನಿ ಸಿದ್ಧಪಡಿಸಲಾಗುತ್ತಿದೆ. ಅದಕ್ಕಾಗಿ 30 ಲಕ್ಷ ರೂ. ಖರ್ಚು ಮಾಡಲಾಗಿದೆ. ಇನ್ನೂ ಇಡೀ ಕಾರ್ಯಕ್ರಮದ ವೆಚ್ಚ 60 ರಿಂದ 70 ಲಕ್ಷ ರೂ. ತಲುಪಬಹುದು ಎಂದು ನಿರೀಕ್ಷಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ತಯಾರಿ ನಡೆದಿದ್ದರೂ, ಸ್ಥಳೀಯ ಆಡಳಿತದಿಂದ ಇನ್ನೂ ಯಾವುದೇ ಅನುಮತಿ ಸಿಕ್ಕಿಲ್ಲ ಎನ್ನಲಾಗಿದೆ. ಭದ್ರತಾ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಈ ನಡುವೆ ಎಕ್ಸ್ ಪೋಸ್ಟ್ ಮೂಲಕ ಪ್ರತಿಕ್ರಿಯೆ ಕೊಟ್ಟಿರುವ ರಾಜ್ಯಪಾಲ ಸಿ.ವಿ. ಆನಂದ್ ಬೋಸ್, ಶಾಂತಿ ಕಾಪಾಡಿಕೊಳ್ಳುವಂತೆ ಹಾಗೂ ಯಾವುದೇ ರೀತಿ ಪ್ರಚೋದನಕಾರಿ ಹೇಳಿಕೆ ನೀಡದಂತೆ ಮನವಿ ಮಾಡಿದ್ದಾರೆ.














