ಮನೆ ರಾಜ್ಯ ಮೈಸೂರು: ಜ.20ರಂದು ಸೆಸ್ಕ್ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ

ಮೈಸೂರು: ಜ.20ರಂದು ಸೆಸ್ಕ್ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ

0

ಮೈಸೂರು(Mysuru): ಸೆಸ್ಕ್ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭವನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ಜ.20ರ ಶುಕ್ರವಾರ ಬೆಳಿಗ್ಗೆ 11.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ತಿಳಿಸಿದರು.

ಬುಧವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕೆ.ಆರ್‌.ನಗರ, ಮದ್ದೂರು, ಮಡಿಕೇರಿಯಲ್ಲಿ ವಿಭಾಗೀಯ ಕಚೇರಿಗಳು, 3 ಉಪವಿಭಾಗ ಹಾಗೂ 7 ಶಾಖಾ ಕಚೇರಿಗಳನ್ನು ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ಉದ್ಘಾಟಿಸಲಿದ್ದು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

19.06 ಕೋಟಿ ವೆಚ್ಚದಲ್ಲಿ ಸೆಸ್ಕ್‌ ವಿವಿಧ ಯೋಜನಾ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. ಇದೇ ಸಂದರ್ಭದಲ್ಲಿ  97.71 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಶಂಕುಸ್ಥಾಪನೆ ನೆರವೇರಿಸುವರು ಎಂದು ಮಾಹಿತಿ ನೀಡಿದರು.

ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನಸಭೆ ವಿರೋಧ‍ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದರು ಹಾಗೂ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದರು.

ಕಳೆದ ಮೂರ್ನಾಲ್ಕು ತಿಂಗಳಿಂದ ಇ–ಕಚೇರಿಯನ್ನು ಸೆಸ್ಕ್‌ ವ್ಯಾಪ್ತಿಯಲ್ಲಿ ಆರಂಭಿಸಲಾಗಿದ್ದು, ಸಿಬ್ಬಂದಿ ಎಲ್ಲಿಂದ ಬೇಕಾದರೂ ಕೆಲಸ ನಿರ್ವಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಯವಿಭವಸ್ವಾಮಿ ತಿಳಿಸಿದರು.

ಬೆಳಕು ಯೋಜನೆಯಡಿ ಬಡವರ ಮನೆಗಳಿಗೆ ಉಚಿತ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುತ್ತಿದೆ. ಅಮೃತ್‌ ಯೋಜನೆಯಡಿ ಪರಿಶಿಷ್ಟ ಸಮುದಾಯದ ಬಿಪಿಎಲ್‌ ಕಾರ್ಡುದಾರರಿಗೆ 75 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡಲಾಗುತ್ತಿದೆ. 250 ಯುನಿಟ್‌’ಗಿಂತ ಕಡಿಮೆ ಉಪಯೋಗಿಸುವವರೂ ಈ ಸೌಲಭ್ಯ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳ ಜೊತೆಗೆ ಅಮೃತ್‌ ಯೋಜನೆಯಡಿ 2 ಲಕ್ಷ ಕುಟುಂಬಗಳಿಗೆ ವಿದ್ಯುತ್‌ ಸೌಲಭ್ಯ ನೀಡಲಾಗುತ್ತಿದೆ. 250 ಯುನಿಟ್‌ ಒಳಗೆ ಬಳಕೆ ಇರಬೇಕು. ಆನ್‌’ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದು. ಯಾವುದೇ ಸಮಸ್ಯೆ ಇದ್ದರೂ 1912ಗೆ ಕರೆ ಮಾಡಬೇಕು ಎಂದು ಹೇಳಿದರು.

ಕ್ಯೂಆರ್‌ ಕೋಡ್’ ಮೂಲಕ ಬಿಲ್‌ ಪಾವತಿ ವ್ಯವಸ್ಥೆಯನ್ನು ಜ.1ರಿಂದ ಪರಿಚಯಿಸಲಾಗಿದೆ. ವಿದ್ಯುತ್‌ ಬಿಲ್‌’ನಲ್ಲಿಯೇ ಕ್ಯೂಆರ್‌ ಕೋಡ್‌ ನಮೂದಾಗಲಿದ್ದು, ಯಾವುದೇ ಯುಪಿಐ ಆ್ಯಪ್‌’ಗಳನ್ನು ಬಳಸಿಕೊಂಡು ಸ್ಕ್ಯಾನ್ ಮಾಡಿ ಹಣ ಪಾವತಿಸಿ ತಕ್ಷಣವೇ ಇ–ರಶೀದಿ ಪಡೆಯಬಹುದು ಎಂದು ತಿಳಿಸಿದರು.

ಸೆಸ್ಕ್‌ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗಾಗಿ 205 ಚಾರ್ಜಿಂಗ್ ಸ್ಟೇಷನ್‌ ತೆರೆಯಲಾಗುತ್ತಿದ್ದು, ಬೆಸ್ಕಾಂಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ 10 ಸ್ಟೇಷನ್‌’ಗಳು ಆರಂಭವಾಗಲಿವೆ ಎಂದರು.

ಇವಿ ಚಾರ್ಜಿಂಗ್‌ ಸ್ಟೇಷನ್‌’ಗಳನ್ನು ಸ್ಥಾಪಿಸಲು ಮುಂದಾಗುವವರಿಗೆ ಸೆಸ್ಕ್‌ ಅಗತ್ಯ ಪ್ರೋತ್ಸಾಹ ನೀಡಲಿದ್ದು, ಸ್ಥಾಪನೆಗೆ ಅನುಮತಿ ನೀಡುತ್ತಿದೆ. ಸೆಸ್ಕ್‌’ನ ನಿವೇಶನಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ವಿವಿಧೆಡೆ ಸ್ಥಾಪಿಸಲಾಗುತ್ತಿದೆ. ರೂಫ್‌ ಟಾಪ್‌ ಸೌರಫಲಕ ಅಳವಡಿಸಿಕೊಳ್ಳುವವರಿಗೂ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.