ಬೆಂಗಳೂರು : ನಗರದ ಹುಳಿಮಾವು ಹಾಗೂ ಆರ್.ಟಿ ನಗರದಲ್ಲಿ ಅಕ್ರಮವಾಗಿ 1.35 ಕೋಟಿ ರೂ. ಮೌಲ್ಯದ 1,889 ಕೆ.ಜಿ ರಕ್ತಚಂದನವನ್ನು ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ.
ಹುಳಿಮಾವು ವ್ಯಾಪ್ತಿಯಲ್ಲಿ ಬಂಧನಕ್ಕೊಳಗಾದ ಇಬ್ಬರ ಗುರುತು ತಿಳಿದುಬರಬೇಕಿದೆ. ಆರ್.ಟಿ ನಗರದಲ್ಲಿ ಬಂಧನವಾದ ಇಬ್ಬರನ್ನು ಆಂಧ್ರಪ್ರದೇಶದ ಅಣ್ಯಮಯ್ಯ ಜಿಲ್ಲೆಯವರಾದ ವರಪ್ರಸಾದ್ ರೆಡ್ಡಿ ಹಾಗೂ ರಾಜ್‌ಶೇಖರ್ ಎಂದು ಗುರುತಿಸಲಾಗಿದೆ. ಓರ್ವ ಬಿ.ಇ ಹಾಗೂ ಇನ್ನೋರ್ವ ಎಂಬಿಎ ಓದಿದ್ದರು ಎಂದು ತಿಳಿದುಬಂದಿದೆ.
ಹುಳಿಮಾವಿನಲ್ಲಿ ಬಂಧಿತ ಆರೋಪಿಗಳಿಬ್ಬರು ಕಾರಿನ ಹಿಂಬದಿ ಸೀಟು ತೆಗೆದು, ಅದರ ಕೆಳಗೆ ರಕ್ತಚಂದನ ಜೋಡಿಸಿಟ್ಟಿದ್ದರು. ಇವುಗಳನ್ನು ಮಾರಾಟ ಮಾಡಲು ತಮಿಳುನಾಡಿಗೆ ಹೋಗುತ್ತಿದ್ದಾಗ ಹುಳಿಮಾವು ಪೊಲೀಸರು ಕಾರು ಅಡ್ಡಗಟ್ಟಿ ಪರಿಶೀಲನೆ ನಡೆಸಿದ್ದು, 60 ಲಕ್ಷ ರೂ. ಮೌಲ್ಯದ 1,150 ಕೆಜಿ ರಕ್ತಚಂದನ ಪತ್ತೆಯಾಗಿದೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನ.29ರಂದು ಆರ್‌ಟಿ ನಗರದಲ್ಲಿ ಬಂಧಿತ ಆರೋಪಿಗಳಿಬ್ಬರು ಬೊಲೆರೋ ವಾಹನದಲ್ಲಿ ಚೆಕ್‌ಪೋಸ್ಟ್ಗಳನ್ನ ದಾಟಿ ಅಕ್ರಮವಾಗಿ ರಕ್ತಚಂದನ ಸಾಗಿಸುತ್ತಿದ್ದರು. ಈ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದು, 75 ಲಕ್ಷ ರೂ. ಮೌಲ್ಯದ 7 ಅಡಿ ಉದ್ದದ 50 ಪೀಸ್‌ಗಳು ಒಟ್ಟು 739 ಕೆ.ಜಿ ರಕ್ತಚಂದನ ಪತ್ತೆಯಾಗಿದೆ. ಸದ್ಯ ಆರ್‌ಟಿ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.















