ಮನೆ ರಾಷ್ಟ್ರೀಯ ಬೆಂಗಳೂರು-ಎರ್ನಾಕುಲಂ ಸೇರಿ ನಾಲ್ಕು ವಂದೇ ಭಾರತ್ ರೈಲುಗಳಿಗೆ ಚಾಲನೆ – ಮೋದಿ

ಬೆಂಗಳೂರು-ಎರ್ನಾಕುಲಂ ಸೇರಿ ನಾಲ್ಕು ವಂದೇ ಭಾರತ್ ರೈಲುಗಳಿಗೆ ಚಾಲನೆ – ಮೋದಿ

0

ಲಕ್ನೋ : ಪ್ರಧಾನಿ ನರೇಂದ್ರ ಮೋದಿ ಅವರಿಂದು ಬೆಂಗಳೂರು-ಎರ್ನಾಕುಲಂ ಸೇರಿ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಚಾಲನೆ ನೀಡಿದರು.

ತಮ್ಮ ಸಂಸದೀಯ ಕ್ಷೇತ್ರವಾದ ಉತ್ತರ ಪ್ರದೇಶದ ವಾರಾಣಸಿಯಿಂದ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಬನಾರಸ್-ಖಜುರಾಹೊ, ಲಕ್ನೋ-ಸಹಾರನ್‌ಪುರ, ಫಿರೋಜ್‌ಪುರ-ದೆಹಲಿ ಮತ್ತು ಎರ್ನಾಕುಲಂ-ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸುವ ರೈಲುಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

ದೇಶದಾದ್ಯಂತ ವಂದೇ ಭಾರತ್ ರೈಲಿಗೆ ಬೇಡಿಕೆ ಹೆಚ್ಚಿದೆ. ಇವುಗಳು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಅಭಿವೃದ್ಧಿಪಡಿಸಿದ ಹೈ ಸ್ಪೀಡ್ ರೈಲುಗಳಾಗಿದ್ದು, ಶನಿವಾರ (ನ.8) ಬೆಳಗ್ಗೆ 8:15ರ ಸುಮಾರಿಗೆ ವಾರಣಾಸಿಯಲ್ಲಿ ನಾಲ್ಕು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಹಸಿರು ನಿಶಾನೆ ತೋರಿದ್ದಾರೆ.

ಈ ಮೂಲಕ ಒಟ್ಟು ವಂದೇ ಭಾರತ್ ರೈಲು ಸೇವೆಗಳ ಸಂಖ್ಯೆ 164ಕ್ಕೆ ಏರಿದೆ. ಈ ರೈಲುಗಳು ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವುದಲ್ಲದೆ, ಪ್ರಾದೇಶಿಕ ಸಂಚಾರವನ್ನು ಸುಧಾರಿಸಿ, ಪ್ರವಾಸೋದ್ಯಮವನ್ನು ಉತ್ತೇಜಿಸಿ, ದೇಶದಾದ್ಯಂತ ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡಲಿವೆ.

ವಂದೇ ಭಾರತ್ ರೈಲು ಕೆಎಸ್‌ಆರ್ ಬೆಂಗಳೂರಿನಿಂದ ಬೆಳಗ್ಗೆ 5:10ಕ್ಕೆ ಹೊರಟು ಮಧ್ಯಾಹ್ನ 1:50ಕ್ಕೆ ಎರ್ನಾಕುಲಂ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 2:20ಕ್ಕೆ ಹೊರಟು ರಾತ್ರಿ 11ಕ್ಕೆ ಬೆಂಗಳೂರು ತಲುಪಲಿದೆ.

ಕೇರಳದ ತ್ರಿಶ್ಯೂರ್, ಪಾಲಕ್ಕಾಡ್, ತಮಿಳುನಾಡಿನ ಕೊಯಮತ್ತೂರು, ಈರೋಡ್, ತಿರುಪ್ಪೂರು ಮತ್ತು ಸೇಲಂ ಹಾಗೂ ಕರ್ನಾಟಕದಲ್ಲಿ ಕೃಷ್ಣರಾಜಪುರದಲ್ಲಿ ನಿಲುಗಡೆಯಾಗಲಿದೆ. 8 ಗಂಟೆ 40 ನಿಮಿಷಗಳಲ್ಲಿ ತಲುಪುವ ವಂದೇ ಭಾರತ್ ಈ ಮಾರ್ಗದಲ್ಲಿ ಸಂಚರಿಸುವ ಅತ್ಯಂತ ವೇಗದ ರೈಲು ಇದಾಗಿದೆ. ಬುಧವಾರದಂದು ಯಾವುದೇ ಸೇವೆ ಇರುವುದಿಲ್ಲ ಎಂದು ಹೇಳಲಾಗಿದೆ.