ಮನೆ ರಾಷ್ಟ್ರೀಯ ಕೇರಳದಲ್ಲಿ ಅಪರೂಪದ ಅಮೀಬಾ ಸೋಂಕಿನ ನಾಲ್ಕನೇ ಪ್ರಕರಣ ಪತ್ತೆ

ಕೇರಳದಲ್ಲಿ ಅಪರೂಪದ ಅಮೀಬಾ ಸೋಂಕಿನ ನಾಲ್ಕನೇ ಪ್ರಕರಣ ಪತ್ತೆ

0

ಕೋಯಿಕ್ಕೋಡ್: ಕೇರಳದಲ್ಲಿ ಅಪರೂಪದ ಅಮೀಬಾ ಸೋಂಕಿನ (ಅಮೀಬಿಕ್ ಮೆನಿಂಗೂ ಎನ್ಸೆಫಾಲಿಟಿಸ್) ನಾಲ್ಕನೇ ಪ್ರಕರಣ ಪತ್ತೆಯಾಗಿದೆ.

Join Our Whatsapp Group

ಉತ್ತರ ಕೇರಳದ ಕೋಯಿಕ್ಕೋಡ್ ಜಿಲ್ಲೆಯ 14 ವರ್ಷದ ಬಾಲಕ ಅಮೀಬಾ ಸೋಂಕಿನಿಂದ ಬಳಲುತ್ತಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಜುಲೈ 1ರಂದು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬಾಲಕನ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ. ಸೋಂಕನ್ನು ಬೇಗನೇ ಪತ್ತೆಹಚ್ಚಿದ ಪರಿಣಾಮ ವಿದೇಶದಿಂದ ತುರ್ತಾಗಿ ಔಷಧಿ ತಂದು ಚಿಕಿತ್ಸೆ ನೀಡಲು ಸಾಧ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಳೆದ ಮೇ ತಿಂಗಳಿಂದ ರಾಜ್ಯದಲ್ಲಿ ಪತ್ತೆಯಾದ ನಾಲ್ಕನೇ ಪ್ರಕರಣ ಇದಾಗಿದೆ. ಸೋಂಕು ಬಾಧಿತರೆಲ್ಲ ಮಕ್ಕಳಾಗಿದ್ದು, ಈ ಪೈಕಿ ಮೂವರು ಮೃತಪಟ್ಟಿದ್ದಾರೆ.

ಅಮೀಬಿಕ್ ಮೆನಿಂಗೂ ಎನ್ಸೆಫಾಲಿಟಿಸ್ ಅನ್ನು ‘ಮಿದುಳು ತಿನ್ನುವ ಅಮೀಬಾ’ ಎಂದೂ ಕರೆಯಲಾಗುತ್ತದೆ. ಕಲುಷಿತ ನೀರಿನ ಮೂಲಕ ಈ ಸೋಂಕು ಹರಡುತ್ತದೆ.

ಕೋಯಿಕ್ಕೋಡ್‌ ಜಿಲ್ಲೆಯಲ್ಲೇ ಬುಧವಾರದಂದು ಅಮೀಬಾ ಸೋಂಕು ಬಾಧಿತ 14 ವರ್ಷದ ಬಾಲಕ ಮೃತಪಟ್ಟಿದ್ದನು. ಇದಕ್ಕೂ ಮೊದಲು ಮೇ 21ರಂದು ಮಲಪ್ಪುರಂ ಜಿಲ್ಲೆಯಲ್ಲಿ 5 ವರ್ಷದ ಬಾಲಕಿ ಮತ್ತು ಜೂನ್ 25ರಂದು ಕಣ್ಣೂರು ಜಿಲ್ಲೆಯಲ್ಲಿ 13 ವರ್ಷದ ಬಾಲಕಿ ಮೃತಪಟ್ಟಿದ್ದರು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಸಭೆ ನಡೆಸಿ, ಸೋಂಕು ಹರಡದಂತೆ ತಡೆಯಲು ಹಾಗೂ ಕಲುಷಿತ ನೀರಿನಲ್ಲಿ ಸ್ನಾನ ಮಾಡದಂತೆ ಸೂಚನೆ ನೀಡಿದ್ದರು. ತೀವ್ರ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿರುವ ಅವರು ಜಲಮೂಲಗಳನ್ನು ಸ್ವಚ್ಛವಾಗಿಡಲು ಎಲ್ಲರೂ ಕಾಳಜಿ ವಹಿಸಬೇಕು ಎಂದು ತಿಳಿಸಿದ್ದರು.

ಈ ಹಿಂದೆ 2023 ಮತ್ತು 2017ರಲ್ಲಿ ಆಲಪ್ಪುಳ ಜಿಲ್ಲೆಯಲ್ಲಿ ಅಮೀಬಾ ಸೋಂಕಿನ ಪ್ರಕರಣ ವರದಿಯಾಗಿತ್ತು. ಪರಾವಲಂಬಿಯಲ್ಲದ, ಏಕಕೋಶ ಜೀವಿ ಅಮೀಬಾ ಬ್ಯಾಕ್ಟೀರಿಯಾ, ಕಲುಷಿತ ನೀರಿನಿಂದ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಸೋಂಕು ಹರಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.