ಬೆಂಗಳೂರು : ಕೆಪಿಎಸ್ಸಿ ಸದಸ್ಯತ್ವ ಕೊಡಿಸುವುದಾಗಿ ಹೇಳಿ ಸಿಎಂ ಹಾಗೂ ರಾಜ್ಯಪಾಲರ ನಕಲಿ ಲೆಟರ್ ಹೆಡ್ ಹಾಗೂ ನಕಲಿ ಸಹಿ ಬಳಸಿ 4 ಕೋಟಿ ಹಣ ಪಡೆದು ವಂಚನೆ ಮಾಡಿದ ಪ್ರಕರಣ ಸಂಬಂಧ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಿಯಾಜ್ ಅಹ್ಮದ್, ಯೂಸುಫ್, ಚಂದ್ರಪ್ಪ ಸೇರಿ ನಾಲ್ವರು ಅರೆಸ್ಟ್ ಆಗಿದ್ದಾರೆ.
ಬಂಧಿತ ಕಿಲಾಡಿ ಗ್ಯಾಂಗ್ ಮಹಿಳೆಯೊಬ್ಬರಿಗೆ ವಂಚಿಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯತ್ವ ಕೊಡಿಸಲು 5 ಕೋಟಿ ಆಫರ್ ನೀಡಿದ್ದು ಬಳಿಕ 4.10 ಕೋಟಿ ಹಣ ಪಡೆದಿದ್ದಾರೆ. ಆರೋಪಿಗಳ ಚಲನವಲನ ಬಗ್ಗೆ ಸಂಶಯ ಬಂದು ಮಹಿಳೆ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ಪಡೆದು ಸಿಸಿಬಿ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ. ರಾಜ್ಯ ಸರ್ಕಾರದ ನಡಾವಳಿಗಳು, ಟಿಪ್ಪಣಿಯನ್ನ ನಕಲು ಮಾಡಿದ್ದ ಆರೋಪಿಗಳು ನೇಮಕಾತಿ ಬಗ್ಗೆ ನಕಲಿ ಟಿಪ್ಪಣಿ ತಯಾರಿಸಿ, ಸಿಎಂ ಹಾಗೂ ರಾಜ್ಯಪಾಲರ ನಕಲಿ ಸಹಿ ಬಳಕೆ ಮಾಡಿ ಮಹಿಳೆಯನ್ನು ವಂಚಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಸಿಸಿಬಿ ಪೊಲೀಸರು ಮಾರ್ಚ್ 26 ರಂದು ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ನಕಲಿ ನೇಮಕಾತಿ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.