ಮನೆ ಅಪರಾಧ ಮೆಡಿಕಲ್ ಸೀಟ್ ಕೊಡಿಸುವುದಾಗಿ 10 ಲಕ್ಷ ರೂ ಪಡೆದು ವಂಚನೆ: ಐವರ ಬಂಧನ

ಮೆಡಿಕಲ್ ಸೀಟ್ ಕೊಡಿಸುವುದಾಗಿ 10 ಲಕ್ಷ ರೂ ಪಡೆದು ವಂಚನೆ: ಐವರ ಬಂಧನ

0

ಬೆಂಗಳೂರು: ದಾವಣಗೆರೆಯಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಮೈಸೂರು ವಿದ್ಯಾರ್ಥಿ ಮತ್ತು ಕುಟುಂಬಸ್ಥರನ್ನು ಬೆಂಗಳೂರಿಗೆ ಕರೆಸಿ 10 ಲಕ್ಷ ರೂಪಾಯಿ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ವಿದ್ಯಾರ್ಥಿಯೊಬ್ಬ ಮೆಡಿಕಲ್ ಸೀಟ್​ಗಾಗಿ ತಯಾರಿ ನಡೆಸುತ್ತಿದ್ದನು. ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ಬರದಿದ್ದ ಹಿನ್ನೆಲೆ ಮತ್ತೊಮ್ಮೆ ನೀಟ್ ಪರೀಕ್ಷೆಗೆ ತಯಾರಿ ನಡೆಸಿದ್ದನು.

ಇದೇ ವೇಳೆ ವಿದ್ಯಾರ್ಥಿಯ ಅಣ್ಣನ ಮೊಬೈಲ್​ಗೆ ಅನಾಮಿಕ ಸಂದೇಶವೊಂದು ಬಂದಿದೆ. ಇದಾದ ಕೆಲ ಹೊತ್ತಲ್ಲೇ ದೂರವಾಣಿ ಕರೆ ಮಾಡಿದ ಅಪರಿಚಿತರು, ನಾಲ್ಕೈದು ವರ್ಷಗಳಿಂದ ಮೆಡಿಕಲ್ ಸೀಟ್ ಕೊಡಿಸುತ್ತಿದ್ದೇವೆ‌. ನಿಮ್ಮ ಮಗನಿಗೆ ದಾವಣಗೆರೆಯಲ್ಲಿ ಸೀಟ್ ಕೊಡಿಸುತ್ತೇವೆ ಎಂದು ಬೆಂಗಳೂರಿಗೆ ಆಹ್ವಾನಿಸಿದ್ದಾರೆ.

ಅದರಂತೆ ಅಪರಿಚಿತರು ಸೂಚಿಸಿದಂತೆ ವಿದ್ಯಾರ್ಥಿ ಮತ್ತು ಪೋಷಕರು ನಗರದ ಕನ್ನಿಂಗ್ ಹ್ಯಾಮ್ ರಸ್ತೆಯ ಕಚೇರಿಯೊಂದಕ್ಕೆ ಹೋಗಿದ್ದಾರೆ. ಈ ವೇಳೆ ಖಾಸಗಿ ಕಾಲೇಜಿನ ಕಾರ್ಯದರ್ಶಿ ಎಂದು ಓರ್ವ ವ್ಯಕ್ತಿ ಪರಿಚಯ ಮಾಡಿಕೊಂಡಿದ್ದು, ಸರ್ಕಾರಿ ಕೋಟಾದಲ್ಲೇ ಸೀಟ್ ಸಿಗುತ್ತೆ ಎಂದು ಮೂರು ಲಕ್ಷ ಅಡ್ವಾನ್ಸ್ ಕೇಳಿದ್ದಾನೆ.

ನಂತರ, ಬಾಸ್ ಅಂತಾ ಮತ್ತೊಬ್ಬ ವ್ಯಕ್ತಿಯ ಪರಿಚಯ ಮಾಡಿಸಲಾಗಿದೆ. ಅವರಿಗೆ ಹತ್ತು ಲಕ್ಷ ನೀಡಿದರೆ ಸೀಟ್ ಸಿಗುವುದು ನಿಶ್ಚಿತ ಎಂದು ನಂಬಿಸಲಾಗಿದೆ. ಮಾತುಕತೆ ಬಳಿಕ ಅಪರಿಚಿತ ಗ್ಯಾಂಗ್ ಸೀಟ್ ಕಾಯ್ದಿರಿಸುವ ಹೆಸರಲ್ಲಿ 10.80 ಲಕ್ಷ ವಸೂಲಿ ಮಾಡಿದೆ.

ಹಣ ನೀಡಿದ ನಂತರ ವಿದ್ಯಾರ್ಥಿ ಪೋಷಕರು ಸೀಟ್​ಗಾಗಿ ಪೋನ್ ಮಾಡಿದ್ದಾರೆ. ಈ ವೇಳೆ ಪೋನ್ ಸ್ವೀಕರಿಸದೆ ಸೈಲೆಂಟ್ ಆಗಿದ್ದ ಅಪರಿಚಿತರು ಕನ್ನಿಂಗ್ ಹ್ಯಾಮ್ ಕಚೇರಿಯಲ್ಲೂ ಕಾಣಿಸಿಕೊಳ್ಳದೆ ಪರಾರಿಯಾಗಿದ್ದರು.

ಪ್ರಕರಣ ಸಂಬಂಧ ಐವರ ಗ್ಯಾಂಗ್ ವಿರುದ್ಧ ವಿದ್ಯಾರ್ಥಿ ಪೋಷಕರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಹೈಗ್ರೌಂಡ್ಸ್ ಠಾಣಾ ಪೊಲೀಸರು, ಐವರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.