ಮನೆ ರಾಜ್ಯ ಸೈಟ್ ಖರೀದಿಗಾಗಿ ಸಹಾಯ ಹೇಳಿ ವಂಚನೆ – ಮಹಿಳೆಯನ್ನು ಮಂಚಕ್ಕೆ ಕರೆದ್ರಾ ಸ್ವಾಮೀಜಿ?

ಸೈಟ್ ಖರೀದಿಗಾಗಿ ಸಹಾಯ ಹೇಳಿ ವಂಚನೆ – ಮಹಿಳೆಯನ್ನು ಮಂಚಕ್ಕೆ ಕರೆದ್ರಾ ಸ್ವಾಮೀಜಿ?

0

ದೊಡ್ಡಬಳ್ಳಾಪುರ : ಸೈಟ್ ತೆಗೆದುಕೊಳ್ಳಲು ಹಣ ಸಹಾಯ ಮಾಡ್ತೀನಿ ಎಂದು ಸ್ವಾಮೀಜಿಯೊಬ್ಬರು ಮಹಿಳೆಯನ್ನು ಮಂಚಕ್ಕೆ ಕರೆದಿರುವ ಆರೋಪ ದೊಡ್ಡಬಳ್ಳಾಪುರದಲ್ಲಿ ಕೇಳಿಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮೇಳೆಕೋಟೆಯ ಮಹರ್ಷಿ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದಗುರೂಜಿ ವಿರುದ್ಧ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ.

ಸೈಟ್ ಖರೀದಿಗೆ ಹಣ ಸಹಾಯ ಮಾಡುವುದಾಗಿ ತಿಳಿಸಿ, ಮಂಚಕ್ಕೆ ಕರೆದಿದ್ದಾರೆ. ಅಲ್ಲದೇ ಕಾಲ್ ಮಾಡಿ, ರೂಂಗೆ ಬಂದರೆ ಹಣ ಕೊಡ್ತೀನಿ ಅಂದಿದ್ದಾರೆ. ಪ್ರತಿನಿತ್ಯ ಪೋನ್ ಮಾಡಿ, ಕಿರುಕುಳ ನೀಡಿ ನಿಂದನೆ ಮಾಡುತ್ತಿದ್ದಾರೆ. ಹಲವು ಬಾರಿ ಆಡಿಯೋ ಕಾಲ್ ಮತ್ತು ವಿಡಿಯೋ ಕಾಲ್ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಆಡಿಯೋ, ವಿಡಿಯೋ ಡಿಲೀಟ್ ಮಾಡಿದರೆ 50 ಸಾವಿರ ರೂ. ಹಣ ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ನಾನು ಒಬ್ಬಂಟಿಯಾಗಿದ್ದಾಗ ಮನೆಗೆ ಬಂದು ಕಿರುಕುಳ ನೀಡಿದ್ದಾರೆ. ಪೊಲೀಸ್ ಠಾಣೆಗೆ ಆಡಿಯೋ, ವಿಡಿಯೋ ಸಮೇತ ದೂರು ನೀಡಿದ್ರೂ ನ್ಯಾಯ ಸಿಗ್ತಿಲ್ಲ. ನನಗೆ ಕಾಟ ಕೊಟ್ಟು ಈಗ ನನ್ನ ವಿರುದ್ಧವೇ ಬ್ರಹ್ಮಾನಂದಗುರೂಜಿ ಮತ್ತು ಆತನ ಪತ್ನಿಯಿಂದ ನಿಂದನೆ ಆರೋಪ ಮಾಡಿದ್ದಾರೆ ಎಂದು ಮಹಿಳೆ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ಈ ಕುರಿತು ಬ್ರಹ್ಮಾನಂದಗುರೂಜಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮಹಿಳೆ ಹಾಗೂ ಆಕೆಯ ಗಂಡ ನನಗೆ 2 ವರ್ಷದ ಹಿಂದೆ ಸೈಟ್ ಖರೀದಿ ವಿಚಾರದಲ್ಲಿ ಪರಿಚಯ ಆಗಿದ್ದರು. 5 ಲಕ್ಷ ರೂ. ಕೊಟ್ಟು ನಿವೇಶನ ಖರೀದಿಸಿದ್ದರು. ನಿವೇಶನ ಖಾತೆ ಆಗದ ಕಾರಣ 5 ಲಕ್ಷ ರೂ. ವಾಪಸ್ ಕೊಡಲಾಗಿದೆ. ಆದ್ರೆ ಈಗ ಉದ್ದೇಶಪೂರ್ವಕವಾಗಿ ನನ್ನ ಬಳಿ ಹಣಕ್ಕಾಗಿ ಪೀಡಿಸಿದ್ದಾರೆ. ಹಣ ಕೊಡದ ಕಾರಣ ಹನಿಟ್ರ‍್ಯಾಪ್ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹಿಳೆ ಹಾಗೂ ಷಡ್ಯಂತ್ರ ರೂಪಿಸಿದವರ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತಿದ್ದೇನೆ. ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಹಾಗೂ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.