ನವದೆಹಲಿ : ರಾಜ್ಯ ಸರ್ಕಾರಗಳು ಚುನಾವಣೆಗೂ ಮುನ್ನ `ಉಚಿತ ಯೋಜನೆಗಳು’ (ಫ್ರೀಬೀಸ್) ಘೋಷಿಸುವ ಪ್ರವೃತ್ತಿಯನ್ನು ಸುಪ್ರೀಂಕೋರ್ಟ್ ತೀವ್ರವಾಗಿ ಟೀಕಿಸಿದೆ. ಇದು ದೇಶದ ದೀರ್ಘಕಾಲೀನ ಅಭಿವೃದ್ಧಿಗೆ ತೊಡಕಾಗುತ್ತಿದೆ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ತಮಿಳುನಾಡು ವಿದ್ಯುತ್ ವಿತರಣಾ ಕಂಪನಿಯ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ರಾಜ್ಯದ ಹಣವನ್ನು ವಿತರಿಸುತ್ತಾ ಹೋದರೆ ದೇಶದ ಅಭಿವೃದ್ಧಿಗೆ ತೊಡಕಾಗುತ್ತದೆ. ಚುನಾವಣೆಗೂ ಮುನ್ನ ಯಾವಾಗಲೂ ಯೋಜನೆಗಳು ಘೋಷಣೆಯಾಗುತ್ತವೆ? ಇದು ಎಷ್ಟು ಕಾಲ ಮುಂದುವರಿಯುತ್ತದೆ? ಎಂದು ಪ್ರಶ್ನಿಸಿದರು.
ಬಡವರು, ಅಗತ್ಯವಿರುವವರಿಗೆ ಸಹಾಯ ಮಾಡುವುದು ಸರಿ. ಆದರೆ ಎಲ್ಲರಿಗೂ ಉಚಿತವಾಗಿ ನೀಡುವುದು ಯಾವ ನ್ಯಾಯ? ಇದು ರಾಜಕೀಯ ಒಲೈಕೆ ಮಾಡುವ ನೀತಿಯಲ್ಲವೇ? ರಾಜ್ಯಗಳು ಆದಾಯದಲ್ಲಿ ಕೊರತೆ ಇದ್ದರೂ ಇಂತಹ ವಿತರಣೆ ಮಾಡುತ್ತಿವೆ. ಹಣ ಎಲ್ಲಿಂದ ಬರುತ್ತದೆ? ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳ ಅಭಿವೃದ್ಧಿಗೆ ಖರ್ಚು ಮಾಡಬೇಕಲ್ಲವೇ? ಎಂದ ನಗದು ವರ್ಗಾವಣೆ ಬಗ್ಗೆಯೂ ಟೀಕಿಸಿದರು.
ಬೆಳಗ್ಗೆಯಿಂದ ಸಂಜೆಯವರೆಗೆ ಉಚಿತ ಆಹಾರ, ಗ್ಯಾಸ್, ವಿದ್ಯುತ್, ನಗದು ಹಣ ನೀಡಿದರೆ ಜನರು ಏಕೆ ಕೆಲಸ ಮಾಡಬೇಕು? ಗೌರವದಿಂದ ಜೀವಿಸಲು ಕೆಲಸ ಮಾಡಬೇಕು. ಇದು ರಾಷ್ಟ್ರ ನಿರ್ಮಾಣವೇ? ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಜನರು ಸ್ವಾವಲಂಬಿಗಳಾಗುವಂತೆ ಮಾಡಬೇಕು, ಸರ್ಕಾರಗಳು ಮಾಡುತ್ತಿರುವುದು ಅಪ್ಪೀಸ್‌ಮೆಂಟ್ ಪಾಲಿಸಿ ಎಂದು ಕರೆದ ನ್ಯಾಯಲಯ, ಉಚಿತ ವಸ್ತುಗಳು ಜನರನ್ನು ಕೆಲಸ ಮಾಡದಂತೆ ಮಾಡುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು. ದೇಶದಾದ್ಯಂತ ಇದೇ ಸಂಸ್ಕೃತಿ ಬೆಳೆಯುತ್ತಿದೆ. ಇದನ್ನು ಪುನರ್ ಪರಿಶೀಲಿಸಬೇಕು ಎಂದು ಸೂಚಿಸಿತು. ತಮಿಳುನಾಡು ಪ್ರಕರಣದಲ್ಲಿ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದುವರಿಸಿದೆ.















