ಮನೆ ರಾಜ್ಯ ಆ.15 ರಂದು ಬಿಎಂಟಿಸಿ ಪ್ರಯಾಣಿಕರಿಗೆ ಉಚಿತ ಪ್ರಯಾಣ ಸೌಲಭ್ಯ

ಆ.15 ರಂದು ಬಿಎಂಟಿಸಿ ಪ್ರಯಾಣಿಕರಿಗೆ ಉಚಿತ ಪ್ರಯಾಣ ಸೌಲಭ್ಯ

0

ಬೆಂಗಳೂರು (Bengaluru): 75ನೇ ಸ್ವಾತಂತ್ರ್ಯೋತ್ಸವ ಮತ್ತು ಬಿಎಂಟಿಸಿ ಸಂಸ್ಥೆಯ ರಜತ ಮಹೋತ್ಸವ ಅಂಗವಾಗಿ ಆಗಸ್ಟ್‌ 15ರಂದು ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಬಿಎಂಟಿಸಿ ಅವಕಾಶ ಕಲ್ಪಿಸಿದೆ.

ಈ ಸಂಬಂಧ ಸಲ್ಲಿಸಿದ್ದ ಪ್ರಸ್ತಾವನೆಗೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದು, ಸಾರ್ವಜನಿಕರು ಒಂದು ದಿನ ವೋಲ್ವೊ ಸೇರಿ ಎಲ್ಲಾ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಬಿಎಂಟಿಸಿ ಅಧ್ಯಕ್ಷ ನಂದೀಶ್‌ರೆಡ್ಡಿ ತಿಳಿಸಿದರು.

ಸ್ವಾತಂತ್ರ್ಯ ದಿನದ ಮುನ್ನ ದಿನ (ಆ.14) 300 ಎಲೆಕ್ಟ್ರಿಕ್ ಬಸ್‌ಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ವಿಧಾನಸೌಧದ ಪೂರ್ವ ದ್ವಾರದಲ್ಲಿ ಬಸ್‌ಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು. ಈಗಾಗಲೇ 9 ಮಿಟರ್ ಉದ್ದದ 90 ಮಿನಿ ಎಲೆಕ್ಟ್ರಿಕ್ ಬಸ್‌ಗಳು ರಸ್ತೆಯಲ್ಲಿ ಓಡಾಡುತ್ತಿವೆ. 12 ಮೀಟರ್ ಉದ್ದದ ಎಲೆಕ್ಟ್ರಿಕ್ ಬಸ್‌ಗಳನ್ನು ಇದೇ ಮೊದಲ ಬಾರಿಗೆ ಸಾರ್ವಜನಿಕ ಸೇವೆಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ಅಪಘಾತ ರಹಿತ ಚಾಲಕರಿಗೆ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಆ.16ರಂದು ವಿತರಿಸಲಾಗುವುದು. 168 ಮಂದಿಗೆ ಚಿನ್ನದ ಪದಕ ಮತ್ತು 2,968 ಮಂದಿಗೆ ಬೆಳ್ಳಿ ಪದಕ ವಿತರಿಸಲಾಗುತ್ತಿದೆ. ಬಿಎಂಟಿಸಿ ಸಿಬ್ಬಂದಿಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಜಯದೇವ ಆಸ್ಪತ್ರೆಯಲ್ಲಿ ಉಚಿತವಾಗಿ ಹೃದಯ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ. 10,700 ಸಿಬ್ಬಂದಿ ಇದರ ಲಾಭ ಪಡೆದುಕೊಳ್ಳಲಿದ್ದು, ಈ ಯೋಜನೆಗೂ ಚಾಲನೆ ನೀಡಲಾಗುತ್ತಿದೆ ಎಂದು ವಿವರಿಸಿದರು.