ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆ ಘಟನೆ ಮಾಸುವ ಮುನ್ನವೇ ಮಂಗಳೂರು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಮತ್ತೆ ಚಾಕು ಇರಿತ ಘಟನೆಗಳು ನಡೆದಿದ್ದು, ಜಿಲ್ಲೆಯಲ್ಲಿಂದು ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಣ್ಣೂರು, ಕೊಂಚಾಡಿ ಮತ್ತು ಉಳ್ಳಾಲ ಪ್ರದೇಶಗಳಲ್ಲಿ ಒಟ್ಟು ಮೂವರು ಯುವಕರಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾದ ಘಟನೆ ವರದಿಯಾಗಿದೆ.
ಮಂಗಳೂರು ಹೊರವಲಯದ ಕಣ್ಣೂರಿನಲ್ಲಿ ಮುಂಜಾನೆ 3 ಗಂಟೆಗೆ, ಇರ್ಶಾದ್ ಎಂಬ ಯುವಕನ ಮೇಲೆ ಐವರು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಇರ್ಶಾದ್ ಮಾರುಕಟ್ಟೆ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭ, ಅವನಿಗೆ ಚಾಕು ಇರಿಯಲಾಗಿದೆ. ತಕ್ಷಣ ಮನೆಯೊಂದಕ್ಕೆ ಓಡಿದ ಇರ್ಶಾದ್ ಪ್ರಾಣಾಪಾಯದಿಂದ ಪಾರಾಗಿ, ಪ್ರಸ್ತುತ ಇವನು ಖಾಸಗಿ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದೇ ದಿನದ ತಡರಾತ್ರಿ ಕೊಂಚಾಡಿ ಹಾಗೂ ಉಳ್ಳಾಲ ಪ್ರದೇಶಗಳಲ್ಲಿ ಇಬ್ಬರ ಮೇಲೆ ಚಾಕು ಇರಿತ ದಾಳಿಗಳು ನಡೆದಿವೆ. ಘಟನೆಯಿಂದ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲಾ ದಾಳಿಗಳು ಸುಹಾಸ್ ಶೆಟ್ಟಿಯ ಹತ್ಯೆಯ ಬೆನ್ನಲ್ಲೇ ನಡೆದಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.
ಬಜ್ಪೆಯ ಕಿನ್ನಿಪದವುವಿನ ಬಳಿ ಗುರುವಾರ ರಾತ್ರಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದರು. ಸುಮಾರು 10 ಮಂದಿ ತಲವಾರುಗಳಿಂದ ಹೊಂಚು ಹಾಕಿ ಹತ್ಯೆಗೈದಿದ್ದರು. ಸುಹಾಸ್ ಶೆಟ್ಟಿ ಸುರತ್ಕಲ್‌ನ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗುತ್ತಿತ್ತು.
ಈ ಹತ್ಯೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ವಿವಿಧ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಮಂಗಳೂರಿನಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ನಿಷೇಧಾಜ್ಞೆ (Section 144) ಜಾರಿ ಮಾಡಿದ್ದಾರೆ.
ಮೂವರು ಯುವಕರ ಮೇಲೆ ಚಾಕು ಇರಿತ ಪ್ರಕರಣದ ಬಗ್ಗೆ ಮಂಗಳೂರು ನಗರ ಪೊಲೀಸರು ತನಿಖೆ ಆರಂಭಿಸಿದ್ದು, ಸುಹಾಸ್ ಶೆಟ್ಟಿ ಹತ್ಯೆಯ ಜೊತೆಗೆ ಯಾವುದೇ ಸಂಪರ್ಕವಿದೆಯೇ ಎಂಬ ದೃಷ್ಟಿಕೋನದಲ್ಲಿ ತನಿಖೆ ನಡೆಯುತ್ತಿದೆ.














