ಮೈಸೂರು: ಹಣಕಾಸಿನ ವಿಚಾರದಲ್ಲಿ ಸ್ನೇಹಿತರ ನಡುವೆ ಆರಂಭವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಉದಯಗಿರಿ ಬಳಿ ಇರುವ ಬೀಡಿ ಕಾರ್ಮಿಕರ ಕಾಲೋನಿ ನಿವಾಸಿ ಆಸಿಫ್ ಅಲಿಯಾಸ್ ಬಿಲ್ಲಾ ಆಸೀಫ್ (36) ಜಗಳದಲ್ಲಿ ಕೊಲೆಯಾದವರು. ಗಲಾಟೆಯಲ್ಲಿ ಕೊಲೆ ಆರೋಪಿ ಸಲೀಂ ಪಾಷ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.
ಬಿಡಿ ಕಾರ್ಮಿಕರ ಕಾಲೋನಿಯ ಬಳಿ ಇರುವ ಟೀ ಅಂಗಡಿಯಲ್ಲಿ ಕುಳಿತಿದ್ದ ಆಸಿಫ್ ಜೊತೆ ಹಣಕಾಸಿನ ವಿಚಾರದಲ್ಲಿ ಸಲೀಂ ಪಾಷ ಜಗಳ ತೆಗೆದಿದ್ದಾನೆ. ಇದರಿಂದಾಗಿ ಇಬ್ಬರ ನಡುವೆ ಹೊಡೆದಾಟ ಶುರುವಾಗಿದೆ. ಗಲಾಟೆ ಗಂಭೀರ ಸ್ವರೂಪಕ್ಕೆ ತಿರುಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಇದೇ ವೇಳೆ ಆರೋಪಿಯು ಆಸಿಫ್ ತಲೆಗೆ ನೀಲಗಿರಿ ಮರದ ಪಟ್ಟಿಯಿಂದ ಹೊಡೆದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಸಿಫ್ ನನ್ನು ಸ್ಥಳೀಯರು ಕೆ.ಆರ್. ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಮಾರ್ಗ ಮಧ್ಯೆ ಆತ ಮೃತಪಟ್ಟಿದ್ದಾನೆ.
ಹೊಡೆದಾಟದಲ್ಲಿ ಗಾಯಗೊಂಡ ಆರೋಪಿ ಸಲೀಂ ಪಾಷನನ್ನೂ ಕೆ.ಆರ್. ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ನಗರದ ಪೊಲೀಸ್ ಆಯುಕ್ತರಾದ ಡಾ.ಬಿ. ರಮೇಶ್, ಡಿಸಿಪಿಗಳಾದ ಮುತ್ತುರಾಜ್ ಹಾಗು ಜಾಹ್ನವಿ, ಎಸಿಪಿ ಶಾಂತಮಲ್ಲಪ್ಪ ಉದಯಗಿರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಜು ಭೇಟಿ ನೀಡಿದ್ದಾರೆ.
ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.