ಮೈಸೂರು: ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕುರಿತು ಬಿಜೆಪಿ ನಾಯಕರ ವಿರೋಧಕ್ಕೆ ಕಿಡಿಕಾರಿರುವ ಎಐಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ, ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಕ್ರಾಂತಿಯಾಗಿದೆ. ಬೇಕಿದ್ದರೇ ಜನಸಾಮಾನ್ಯರ ಬಳಿ ಬಂದು ನೋಡಿ ಎಂದು ತಿರುಗೇಟು ನೀಡಿದರು.
ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರ್. ಅಶೋಕ್ ಅವರು ವಿಧಾನಸೌಧದ ಕುಳಿತು ಮಾತಾನಾಡುವುದಲ್ಲ. ಬನ್ನಿ ಜನಸಾಮಾನ್ಯರ ಹತ್ತಿರ, ಬೀದಿಗೆ ಬಂದು ನೋಡಿ. ಸುಮ್ಮನೆ ಬಾಯಿಗೆ ಬಂದ ಹಾಗೆ ಮಾತನಾಡೋದಲ್ಲ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಕ್ರಾಂತಿಯೇ ಆಗುತ್ತಿದೆ. ಆರ್ಥಿಕ, ಸಾಮಾಜಿಕ, ಧಾರ್ಮಿಕ ಸಬಲೀಕರಣ ಆಗುತ್ತಿದೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ಹಲವು ರೀತಿಯಲ್ಲಿ ಉಪಯೋಗವಾಗುತ್ತಿದೆ. ಮಹಿಳೆ ಆ ಎರಡು ಸಾವಿರ ರೂಪಾಯಿ ಖರ್ಚು ಮಾಡುವ ಸ್ವಾತಂತ್ರ್ಯ ಅವಳಿಗಿದೆ. ಅವಳ ಆರೋಗ್ಯ ನೋಡಿಕೊಳ್ಳಲಿಕ್ಕೆ ಅನುಕೂಲ ಆಗುತ್ತದೆ. ಸಿದ್ದರಾಮಯ್ಯ ಹಸಿವು ಮುಕ್ತ ಕರ್ನಾಟಕ ಮಾಡಲು ಅನ್ನಭಾಗ ತಂದರು. ಆದರೆ ಬಿಜೆಪಿಯವರದ್ದು ಹಾರಿಸ್ಟೋಕ್ರೇಟಿಕ್ ಮೈಂಡ್ ಸೆಟ್. ರಾಜ್ಯದಲ್ಲಿ ಆರ್ಥಿಕ ಭದ್ರತೆ, ಆಹಾರ ಭದ್ರತೆ ಸಿಕ್ಕಿದೆ ಎಂದರು. ಗ್ಯಾರಂಟಿ ಸಮಿತಿ ರಚನೆ ಮಾಡಿ ಒಂದುವರೆ ವರ್ಷ ಆಗಿದೆ. ಈಗ ಯಾಕೆ ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಲು ಗ್ಯಾರಂಟಿ ಸಮಿತಿ ಬೇಕೇ ಬೇಕು ಎಂದು ಭವ್ಯ ನರಸಿಂಹಮೂರ್ತಿ ತಿಳಿಸಿದರು.