ಮನೆ ಸ್ಥಳೀಯ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿತ: ವಿದ್ಯಾರ್ಥಿಗಳಿಗೆ ನಿರಾಸೆ ಮೂಡಿಸಿದ ಬಜೆಟ್– ಎಸ್ ಎಫ್ ಐ

ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿತ: ವಿದ್ಯಾರ್ಥಿಗಳಿಗೆ ನಿರಾಸೆ ಮೂಡಿಸಿದ ಬಜೆಟ್– ಎಸ್ ಎಫ್ ಐ

0

ಬೆಂಗಳೂರು:  ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ 2020-21 ರಲ್ಲಿ 13% , 2021-22 ರಲ್ಲಿ 12.7% , 2022-23 ರಲ್ಲಿ 12.9% , 2023-24 ರಲ್ಲಿ 11% ಹಾಗೂ ಈ 2024-25 ರ ಬಜೆಟ್ ನಲ್ಲಿ  12% ಹಣ ಮೀಸಲಿಟ್ಟಿದೆ ಕಳೆದ ೪ ವರ್ಷಗಳ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ್ದ ಪ್ರಾಧಾನ್ಯತೆ  ಕಡಿಮೆಯಾಗುತ್ತಾ ಬಂದಿದೆ. 44,422 ಕೋಟಿ ರೂಪಾಯಿ ಈ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ನೀಡಿದ್ದು, ಇದು ಶಿಕ್ಷಣ ಕ್ಷೇತ್ರವನ್ನು ಸರ್ಕಾರ ಕಡೆಗಣಿಸಿದ್ದು ಕಂಡುಬರುತ್ತದೆ.

ಶಿಕ್ಷಣ ಕ್ಷೇತ್ರವನ್ನು ಪ್ರಾಧಾನ್ಯತೆಯಾಗಿ ತೆಗೆದುಕೊಳ್ಳಬೇಕಿದ್ದ ಸರ್ಕಾರ ಖಾಸಗಿಯವರ ಸಹಭಾಗಿತ್ವವನ್ನು ನಿರೀಕ್ಷಿಸುತ್ತಿರುವುದು ಸ್ಪಷ್ಟವಾಗುತ್ತದೆ. ಹಾಗೆಯೇ ಕಾಂಗ್ರೆಸ್ ಸರ್ಕಾರ ಶಿಕ್ಷಣವನ್ನು ಗ್ಯಾರಂಟಿ ಪಟ್ಟಿಗೆ ಸೇರಿಸಬೇಕಿತ್ತು. ಶಿಕ್ಷಣ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ದೂರದೃಷ್ಟಿಕೋನ ಮತ್ತು ಅಭಿವೃದ್ಧಿ ಕಣ್ಣೋಟ ಇಲ್ಲ ಎಂಬುದು ಈ ಬಜೆಟ್ ನಲ್ಲಿ ಸಾಬೀತಾಗಿದೆ.

ಎಸ್ ಎಫ್ ಐ ಸಂಘಟನೆ ರಾಜ್ಯ ಸಮಿತಿಯು ಮುಖ್ಯಮಂತ್ರಿಗಳಿಗೆ ರಾಜ್ಯದಲ್ಲಿ ಹೊಸ ಹಾಸ್ಟೆಲ್ ಮಂಜೂರು ಮಾಡಲು ಮನವಿ ಸಲ್ಲಿಸಿದ ಭಾಗವಾಗಿ ಬಜೆಟ್ ನಲ್ಲಿಂದು ಮೊರಾರ್ಜಿ ದೇಸಾಯಿ, ಅಲ್ಪಾ ಸಂಖ್ಯಾತರ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ 345 ಹಾಸ್ಟೆಲ್ ಗಳನ್ನು ಘೋಷಣೆ ಮಾಡಿದ್ದು ಸ್ವಾಗತಾರ್ಹ.

ವಸತಿ ನಿಲಯ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕನಿಷ್ಠ  3500 ರೂ ಗಳಿಗೆ ಹೆಚ್ಚಿಸಬೇಕೆಂದು ಬೇಡಿಕೆಯ ನಿರೀಕ್ಷೆ ಹುಸಿಯಾಗಿದ್ದು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಹಾಗೂ ಅಲ್ಪಾಸಂಖ್ಯಾತ ಕಲ್ಯಾಣ ಇಲಾಖೆಗಳಡಿ ಇರುವ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾಸಿಕ ಬೋಜನ ವೆಚ್ಚವನ್ನು 1750 ದಿಂದ1850 ರೂಪಾಯಿಗೆ  ರೂ. 100 ಹೆಚ್ಚಳ ಮಾಡಿದ್ದು ಅತೃಪ್ತಿ ತಂದಿದೆ.  ಕೇವಲ ನೂರು ರೂಪಾಯಿ ಹೆಚ್ಚಳದಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಪೌಷ್ಠಿಕ ಆಹಾರ ಒದಗಿಸಲು ಅಸಾಧ್ಯವಾಗುತ್ತದೆ.

ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ ಮತ್ತು ಸಹಬಾಳ್ವೆಯ ವಿದ್ಯಾ-ಕೇಂದ್ರಗಳನ್ನಾಗಿ ರೂಪಿಸಲು ನಾವು-ಮನುಜರು ಎಂಬ ಹೆಸರಿನಲ್ಲಿ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಾರಕ್ಕೆ ಎರಡು ಗಂಟೆಗಳ ವಿಚಾರ-ವಿಮರ್ಶೆ ಮತ್ತು ಸಂವಾದ ಚಟುವಟಿಕೆಗಳನ್ನು ಒಳಗೊಂಡ ತರಗತಿಗಳನ್ನು ನಡೆಸುವುದನ್ನು ಎಸ್ಎಫ್ಐ ಸ್ವಾಗತಿಸುತ್ತದೆ.

ಸರ್ಕಾರಿ ವಿಶ್ವವಿದ್ಯಾಲಯಗಳ ಸಮಗ್ರ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಬೇಕಿತ್ತು ವಿಶೇಷವಾಗಿ ನೂತನ 7 ವಿವಿಗಳಿಗೆ ವಿಶೇಷ ಅನುದಾನ ಘೋಷಿಸಿ ಮೇಲೆತ್ತುವ ಕೆಲಸ ಮಾಡಬೇಕಿತ್ತು. ರೈತ ವಿದ್ಯಾನಿಧಿ,  ವಿದ್ಯಾಸಿರಿ ವಿತರಣೆ ಪುನರ್ ಘೋಷಣೆ ಮಾಡಬೇಕಿತ್ತು. ಕಡಿತ ಮಾಡಿದ ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನ ಸೇರಿದಂತೆ ಎಲ್ಲಾ ವಿಭಾಗದ ಎಲ್ಲಾ ರೀತಿಯ ಬಾಕಿ ಇರುವ ವಿದ್ಯಾರ್ಥಿ ವೇತ ಬಿಡುಗಡೆ ಹಾಗೂ ಹೆಚ್ಚಿಸುವ ಅವಶ್ಯಕತೆ ಇತ್ತು. ಬಹುತೇಕ ಎಲ್ ಕೆಜಿ ಯಿಂದು ಪಿಜಿ ವರೆಗೂ ಶೌಚಾಲಯ, ಕೊಠಡಿ, ಉಪಕರಣಗಳು, ಮೂಲಭೂತ ಸೌಕರ್ಯಗಳಿಗಾಗಿ ಸಾರ್ವಜನಿಕ ಸಾಹಬಾಗಿತ್ವ ಹೆಸರಿನಲ್ಲಿ ಸಿ ಎಸ್ ಆರ್   ನಿಧಿ ಮೇಲೆ ಸರ್ಕಾರ ಅವಲಂಬನೆ ಆಗಿರುವುದು ಸರಿಯಲ್ಲ ಈ ವ್ಯವಸ್ಥೆ ಸರ್ಕಾರಿ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿ ಕಾರ್ಪೋರೆಟ್ ಶಿಕ್ಷಣಕ್ಕೆ ಮುನ್ನುಡಿ ಬರೆಯುತ್ತಿದೆ ಎಂದು ಎಸ್ ಎಫ್ ಐ ಆತಂಕ ವ್ಯಕ್ತಪಡಿಸಿದೆ.

ಜನಪ್ರಿಯ ಯೋಜನೆಗಳಲ್ಲಿ ಒಂದಾದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮರುಜಾರಿ ಮಾಡಬೇಕಿತ್ತು. ಶುಲ್ಕ ಪುನರ್ ಪಾವತಿ, ಅಗತ್ಯ ತರಗತಿ ಕೊಠಡಿಗಳ ನಿರ್ಮಾಣ, ಶೌಚಾಲಯ, ಪ್ರಯೋಗಾಲಯ,ಉಚಿತ ಲ್ಯಾಪ್ಟಾಪ್, ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ವಿಶೇಷವಾಗಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಡಿ ದರ್ಜೆಯ ಸಿಬ್ಬಂದಿ ನೇಮಕ,  ಸೇರಿದಂತೆ ಮುಂತಾದ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ಹಾಗೂ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ ನಲ್ಲಿ 30% ಮೀಸಲಿಡಬೇಕಿತ್ತು.

ಖಾಲಿ ಇರುವ ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸುವುದಾಗಿ ಬಜೆಟ್ ನಲ್ಲಿ ಹೇಳಿರುವುದು ಸ್ವಾಗತಾರ್ಹ. ಇದು ಕೂಡಲೇ ಕಾರ್ಯರೂಪಕ್ಕೆ ಬರಬೇಕಿದೆ. ಘೋಷಣೆಗಳು ಭಾಷಣವಾಗದೆ ಜಾರಿಗೊಳಿಸಲು ಮುಂದಾಗಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ಮೈಸೂರು ಜಿಲ್ಲಾ ಸಮಿತಿ ಸರ್ಕಾರವನ್ನು ಒತ್ತಾಯಿಸುತ್ತದೆ.