ಮಂಡ್ಯ: ಮಕ್ಕಳ ಕಡ್ಡಾಯವಾಗಿ ಶಾಲೆಗೆ ಹಾಜರಾಗುವುದನ್ನು ಶಿಕ್ಷಕರು ಖಾತ್ರಿ ಪಡಿಸಿಕೊಳ್ಳಬೇಕು ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಉತ್ತಗೊಳಿಸಬೇಕು ಎಂದು ಜಿ.ಪಂ. ಸಿಇಒ ನಂದಿನಿ ಕೆ.ಆರ್.ರವರು ಸೂಚಿಸಿದರು.
2025ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 25% ಫಲಿತಾಂಶ ಪಡೆದ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದ ಅವರು ಸ್ಥಳದಲ್ಲಿದ್ದ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಶಾಲೆಯನ್ನು ದತ್ತು ಪಡೆದು ಶೇಕಡ 100 ರಷ್ಟು ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ಮಕ್ಕಳನ್ನುದ್ದೇಶಿಸಿ ಮಾತನಾಡಿ, ಶಾಲೆಗೆ ಗೈರು ಹಾಜರಾಗಬಾರದು, ಗೈರು ಹಾಜರಾದಲ್ಲಿ ನಿಮ್ಮನ್ನು ಪರೀಕ್ಷೆಗೆ ಕೂರಿಸಲಾಗುವುದಿಲ್ಲ, ವಿದ್ಯಾರ್ಥಿಗಳು ಗ್ರಾಮ ಪಂಚಾಯತ್ ನ ಗ್ರಂಥಾಲಯದ ಉಪಯೋಗ ಪಡೆಯಬೇಕು, ಪಠ್ಯ ಅರ್ಥವಾಗದಿರುವ ಸಂದರ್ಭದಲ್ಲಿ ಶಿಕ್ಷಕರರ ಜತೆ ಸಮಾಲೋಚಿಸಿ ಕಲಿತುಕೊಳ್ಳಲು ಪ್ರಯತ್ನಿಸಬೇಕು ಎಂದು ತಿಳಿಸಿ, ಗೈರು ಹಾಜರಾಗುವ ಮಕ್ಕಳ ಪೋಷಕರಿಗೆ ತಿಳಿವಳಿಕೆ ಪತ್ರ ನೀಡುವಂತೆ ಮುಖ್ಯೋಪದ್ಯಾಯರಿಗೆ ಸೂಚನೆ ನೀಡಿದರು.
ಒಂದು ವಾರದೊಳಗಾಗಿ ಎಲ್ಲಾ 54 ಮಕ್ಕಳಿಗೆ ಪರೀಕ್ಷೆ ನಡೆಸಿ ಕಡಿಮೆ ಅಂಕ ಗಳಿಸಿದ 27 ಮಕ್ಕಳನ್ನು ಒಂದು ಸೆಕ್ಷನ್, ಹೆಚ್ಚು ಅಂಕ ಗಳಿಸಿದ 27 ಮಕ್ಕಳನ್ನು ಒಂದು ಸೆಕ್ಷನ್ ಮಾಡಬೇಕು. ಕಡಿಮೆ ಅಂಕ ಗಳಿಸಿದ ಮಕ್ಕಳ ಸೆಕ್ಷನ್ ಗೆ ಹೆಚ್ಚಿನ ನಿಗಾ ವಹಿಸಿ ವಿಷಯಗಳನ್ನು ಭೋದನೆ ಮಾಡಬೇಕು ಎಂದು ಮುಖ್ಯೋಪದ್ಯಾಯರಿಗೆ ಸೂಚನೆ ನೀಡಿದರು.
ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಬೇಕು, ಗುಂಪು ಅಧ್ಯಯನ ಮಾಡಲು ಅವಕಾಶ ಕಲ್ಪಿಸಬೇಕು, ಮಕ್ಕಳಿಗೆ ಪಾಠದ ಬಗ್ಗೆ ಪ್ರಶ್ನೆಗಳನ್ನು ಕೇಳುವ ಮೂಲಕ ವಿಷಯ ಅರ್ಥವಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು, ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿಶೇಷ ಆಶಕ್ತಿ ವಹಿಸಿ ಪಾಠ ಮಾಡಬೇಕೆಂದು ಶಿಕ್ಷಕರಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳನ್ನು ಪಟ್ಟಿ ಮಾಡಿ, ಸದರಿ ಶಾಲೆಗಳನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ದತ್ತು ನೀಡಲು ಅಗತ್ಯ ಕ್ರಮವಹಿಸುವಂತೆ ಜಿ.ಪಂ. ಉಪಕಾರ್ಯದರ್ಶಿ ರವರಿಗೆ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕಿನಲ್ಲಿನ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳನ್ನು ದತ್ತು ಪಡೆಯಬೇಕು ಹಾಗೂ ವಿದ್ಯಾರ್ಥಿಗಳನ್ನು ಆಯಾ ಶಾಲೆಯ ಶಿಕ್ಷಕರು ದತ್ತು ಪಡೆದು ಫಲಿತಾಂಶ ಉತ್ತಮಗೊಳಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಲಕ್ಷ್ಮಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀಣಾ, ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ಹಾಗೂ ಶಾಲಾ ಮುಖ್ಯೋಪದ್ಯಾಯರು, ಶಿಕ್ಷಕರು ಹಾಜರಿದ್ದರು.














