ಮೈಸೂರು : ಮೈಸೂರು ಜಿಲ್ಲಾ ವೀರ ಮಡಿವಾಳರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ, ಹಿರಿಯ ಸಂಘಟಕರಾದ ಜಿ.ಎಸ್.ಸತ್ಯನಾರಾಯಣ ಅವರನ್ನು ಸಮುದಾಯದ ಮುಖಂಡರು ಅವಿರೋಧವಾಗಿ ಆಯ್ಕೆ ಮಾಡಿದರು.
ನಗರದ ನಜರ್ಬಾದ್ನಲ್ಲಿರುವ ಪಿಡಬ್ಲ್ಯೂಡಿ ಅತಿಥಿ ಗೃಹದಲ್ಲಿ ಇಂದು ಬೆಳಗ್ಗೆ ನಡೆದ ಮೈಸೂರು ಜಿಲ್ಲೆ ಮತ್ತು ತಾಲ್ಲೂಕುಗಳ ಮಡಿವಾಳ ಸಂಘಟನೆಯ ಅಧ್ಯಕ್ಷರುಗಳು ಮತ್ತು ಮುಖಂಡರ ಸುದೀರ್ಘ ಸಭೆಯಲ್ಲಿ ಚರ್ಚೆ ನಡೆದು ಅಂತಿಮವಾಗಿ ಜಿ.ಎಸ್.ಸತ್ಯನಾರಾಯಣ ಅವರೇ ಸೂಕ್ತ ಅಭ್ಯರ್ಥಿ ಎಂದು ತೀರ್ಮಾನಿಸಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲಾಯಿತು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಜಿ.ಎಸ್.ಸತ್ಯನಾರಾಯಣ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಡಿವಾಳ ಸಮುದಾಯದವರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದಾರೆ. ಅವರುಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ಸಮುದಾಯವನ್ನು ಸಂಘಟಿಸಿ ಸರ್ಕಾರ ಮತ್ತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಸೆಳೆದು ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ನಮ್ಮವರಿಗೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ಮಡಿವಾಳ ವೃತ್ತಿ ಮಾಡುವರಿಗೆ ಸ್ವಯಂ ಉದ್ಯೋಗ ನಡೆಸಲು ಸಾಲ ಸೌಲಭ್ಯ, ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳು ದೊರಕಿಸಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಶೀಘ್ರದಲ್ಲೇ ಮೈಸೂರು ನಗರದಲ್ಲಿ ಜಿಲ್ಲಾ ಮಡಿವಾಳರ ಸಂಘದ ಕಚೇರಿಯನ್ನು ತೆರೆಯಲಾಗುವುದು. ಅಲ್ಲಿ ಸಮುದಾಯದ ಕುಂದು ಕೊರತೆಗಳನ್ನು ಆಲಿಸಲಾಗುವುದು. ನೂತನ ಸಂಘದ ಉದ್ಘಾಟನಾ ಸಮಾರಂಭದಲ್ಲಿ ನಮ್ಮ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮತ್ತು ಇನ್ನಿತರ ಸಮಾಜ ಸೇವಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತೇವೆ ಎಂದರು.
ಸಮುದಾಯದ ಮುಖಂಡರು ಮಾತನಾಡಿ, ಜಿಲ್ಲಾ ಮಟ್ಟದ ಮಡಿವಾಳ ಸಂಘಟನೆಯಲ್ಲಿ ಎಲ್ಲ ತಾಲ್ಲೂಕುಗಳಿಗೂ ಆದ್ಯತೆ ನೀಡಬೇಕು. ಸಮುದಾಯದವರು ಕಷ್ಟದಲ್ಲಿದ್ದಾಗ ಸೂಕ್ತವಾಗಿ ಸ್ಪಂದಿಸಬೇಕು ಎಂದು ನೂತನ ಅಧ್ಯಕ್ಷರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಂಜನಗೂಡು ವೀರ ಮಡಿವಾಳರ ಸಂಘದ ತಾಲ್ಲೂಕು ಅಧ್ಯಕ್ಷರಾದ ಡಾ.ಡಿ.ಚಂದ್ರು ಕೇಶವ, ಶ್ರೀನಿವಾಸ್, ಗಿರೀಶ್, ಶ್ರೀರಾಮ್, ಚಿಕ್ಕಣ್ಣ, ಮಹೇಶ್, ಜಗದೀಶ್, ರಂಗಸ್ವಾಮಿ, ರವಿ, ಮಡುವಿನಹಳ್ಳಿ ಮಹದೇವು, ಮಂಜುಶೆಟ್ಟಿ, ಸ್ವಾಮಿ, ಜಗದೀಶ್, ಸಂತೋಷ್, ಕೆಂಬಾಲ್ ರಾಮು, ಮಹೇಶ್, ಸೇರಿದಂತೆ ವಿವಿಧ ತಾಲ್ಲೂಕುಗಳ ಮುಖಂಡರು ಹಾಜರಿದ್ದರು.














