ಗದಗ : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ ಕಂಡು ಬಂದಿದೆ. ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ನಡೆದ ಈ ಘಟನೆ ಎಲ್ಲರ ಮನಸ್ಸನ್ನು ಕಾಡುವಂತಹ ಭೀಕರತೆ ಹೊಂದಿದೆ. ಪತ್ನಿಯೇ ಲವರ್‌ನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿ ಶವವನ್ನು ಬಾವಿಗೆ ಎಸೆದ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ.
ಈ ಭೀಕರ ಘಟನೆ ಮುಗಳಿ ಗ್ರಾಮದಲ್ಲಿ ನಡೆದಿದೆ. 30 ವರ್ಷದ ಶಂಕ್ರಪ್ಪ ಅಲಿಯಾಸ್ ಕೊಳ್ಳಿ ಎಂಬುವವರು ಹತ್ಯೆಯಾದವರು. ಶಂಕ್ರಪ್ಪ ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ನಿವಾಸಿಯಾಗಿದ್ದು, ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಂಕ್ರಪ್ಪ ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ವಿದ್ಯಾರನ್ನು ಪ್ರೀತಿಸಿ ಮದುವೆಯಾಗಿದ್ದ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಶಿವಕುಮಾರ್ ಎಂಬುವರೊಂದಿಗೆ ವಿದ್ಯಾಗೆ ಅಕ್ರಮ ಸಂಬಂಧ ಬೆಳೆದಿತ್ತು. ಈ ವಿಷಯ ಶಂಕ್ರಪ್ಪನಿಗೆ ಗೊತ್ತಾಗಿದ್ದರಿಂದ ಹೆದರಿದ ಶಿವಕುಮಾರ್ ಮತ್ತು ವಿದ್ಯಾ ಶಂಕ್ರಪ್ಪನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಶಂಕ್ರಪ್ಪನನ್ನು ಕೊಲೆ ಮಾಡಿದ ನಂತರ, ಆತನ ಶವವನ್ನು ಕೈಕಾಲು ಕಟ್ಟಿ ಹಾಸಿಗೆಯಲ್ಲಿ ಸುತ್ತಿ, ಮುಗಳಿ ಗ್ರಾಮದ ಜಮೀನಿನಲ್ಲಿ ಇದ್ದ ಬಾವಿಗೆ ಎಸೆದಿದ್ದಾರೆ. ಬಾವಿಯಲ್ಲಿ ಶವ ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.















