ಮಳವಳ್ಳಿ: ಮಂಡ್ಯ ಜಿಲ್ಲಾಡಳಿತದ ವತಿಯಿಂದ ಮಳವಳ್ಳಿ ತಾಲ್ಲೂಕಿನಲ್ಲಿ ಗಗನಚುಕ್ಕಿ ಜಲಪಾತೋತ್ಸವವನ್ನು ಸೆಪ್ಟೆಂಬರ್ 14 ಹಾಗೂ 15 ರಂದು ಆಯೋಜಿಸಲಾಗಿದೆ ಎಂದು ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ತಿಳಿಸಿದರು.
ಅವರು ಶಿವನಸಮುದ್ರದ ಲಕ್ಷದ್ವೀಪ ಹೋಟೆಲ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸೆಪ್ಟೆಂಬರ್ 14 ರಂದು ಮುಖ್ಯ ಮಂತ್ರಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದು,ಇದರೊಂದಿಗೆ ಲೇಜರ್ ಹಾಗೂ ಲೈಟಿಂಗ್ ಗಳನ್ನು ಸಹ ಉದ್ಘಾಟಿಸುವರು ಎಂದರು.
ಗಗನಚುಕ್ಕಿಯನ್ನು ಪ್ರಸಿದ್ಧ ಪ್ರವಾಸಿತಾಣವಾಗಿಸಲು ಹಾಗೂ ಹೆಚ್ಚಿನ ಯುವಜನರನ್ನು ಆಕರ್ಷಿಸಲು ಜಲಪಾತೋತ್ಸವ ದಂತಹ ಕಾರ್ಯಕ್ರಮ ಅವಶ್ಯಕವಾಗಿದೆ ಎಂದರು.
ಎರಡು ದಿನಗಳ ಕಾಲ ನಡೆಯುವ ಗಗನಚುಕ್ಕಿ ಜಲಪಾತೋತ್ಸವದ ಹಿನ್ನಲೆ ಆಗಮಿಸುವ ಸಾರ್ವಜನಿಕರಿಗೆ ಕಾರ್ಯಕ್ರಮದ ಜೊತೆಗೆ ಉಚಿತ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಊಟದ ವ್ಯವಸ್ಥೆ ಮಾಡಲಾಗಿದೆ.ಪರಿಸರದ ಸೌಂದರ್ಯ ಸವಿಯುವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಬೆಳಿಗ್ಗೆಯಿಂದ ರಾತ್ರಿಯವರೆಗೆ ಇರುತ್ತದೆ ಎಂದರು.
ಗಗನ ಚುಕ್ಕಿಯನ್ನು ಬೃಹತ್ ಆಕರ್ಷಣೀಯ ಕೇಂದ್ರವನ್ನಾಗಿಸಲು ವಿವಿಧ ಕ್ರೀಡಾ ಚಟುವಟಿಕೆಗಳು ಹಾಗೂ ಇಲ್ಲಿ ಸಿಗುವ ಸೌಲಭ್ಯ ದೊಂದಿಗೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ.ಈ ಯೋಜನೆ ಅನುಷ್ಠಾನಗೊಂಡರೆ ಹಲವಾರು ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ ಎಂದರು.
ಎಷ್ಯಾದಲ್ಲೇ ಮೊದಲು ಜಲ ವಿದ್ಯುತ್ ಉತ್ಪದಾನೆ ಮಾಡಿದ ಹೆಗ್ಗಳಿಕೆ ಶಿವನಸಮುದ್ರ ವಿದ್ಯುತ್ ಕೇಂದ್ರಕ್ಕೆ ಸಲ್ಲುತ್ತದೆ. ಮೈಸೂರು-ಮಂಡ್ಯ- ಚಾಮರಾಜನಗರ ಜಿಲ್ಲೆಗಳಲ್ಲಿ ಇರುವ ಪ್ರವಾಸಿ ಸ್ಥಳಗಳ ಪ್ರವಾಸಿ ಸರ್ಕೂಟ್ ರಚಿಸಬೇಕು.ಇದಲ್ಲದೇ ಸುತ್ತ ನೀರಿರುವ ಐಲ್ಯಾಂಡ್ ಪ್ರದೇಶ ಗಗನ ಚುಕ್ಕಿಯಲ್ಲಿದ್ದು,ಇಲ್ಲಿ ಸಾಕು ಪ್ರಾಣಿಗಳ ಪ್ರಾಣಿ ಸಂಗ್ರಾಹಲಯ, ಸುತ್ತ ವಾಕಿಂಗ್ ಪಾಥ್ ನಿರ್ಮಿಸಲು ಚಿಂತಿಸಲಾಗುತ್ತಿದ್ದು,ಈ ಬಗ್ಗೆ ಅರಣ್ಯ ಸಚಿವರೊಂದಿಗೆ ಚರ್ಚಿಸಲಾಗು ವುದು ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಲಾಗಿದ್ದು,ಬೆಳಗಿನ ಕಾರ್ಯಕ್ರಮವನ್ನು ಸ್ಥಳೀಯ ಕಲಾವಿದರಿಗೆ ನೀಡಲಾಗಿದೆ ಎಂದರು.
ಖ್ಯಾತ ಸಂಗೀತ ಸಂಯೋಜಕ ರವಿ ಬಸ್ರೂರು ಅವರು ಇದೇ ಮೊದಲ ಬಾರಿಗೆ ಲೈವ್ ಆಗಿ ಸೆ.15 ರಂದು ಕಾರ್ಯಕ್ರಮ ನೀಡುತ್ತಿದ್ದಾರೆ ಎಂದ ಅವರು ಕಾರ್ಯಕ್ರಮದ ವಿವರ ನೀಡಿದರು.
ಸೆಪ್ಟೆಂಬರ್ 14 ರಂದು ಶನಿವಾರ
ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
ಮಧ್ಯಾಹ್ನ 2 ಗಂಟೆಯಿಂದ ಸಂಜೆ 4.30 ಗಂಟೆವರೆಗೆ ನಾಗೇಶ್ ಕಂದೇಗಾಲ ಮತ್ತು (ಕಲಾವತಿ ದಯಾನಂದ್, ಅಜಯ್ ವಾರಿಯರ್,ಜೋಗಿ ಸುನಿತಾ, ಚಿಂತನ್ ವಿಕಾಸ್, ಸುಹನಾ ಸೈಯದ್) ಇವರಿಂದ ಭಾವಗೀತೆಗಳು.
ಸಂಜೆ 4.30 ರಿಂದ 6 ಗಂಟೆವರೆಗೆ ಪ್ರಖ್ಯಾತ ಕಾಮಿಡಿ ಕಿಲಾಡಿಗಳು ಕಲಾವಿದರಿಂದ ಹಾಸ್ಯ ಮನರಂಜನೆ.
ಸಂಜೆ 7 ಗಂಟೆಯಿಂದ ರಾತ್ರಿ 10.30 ರವರೆಗೆ ಮಣಿಕಾಂತ್ ಕದ್ರಿ, ಚಂದನ್ ಶೆಟ್ಟಿ, ಹಂಸಿಕಾ ಅಯ್ಯರ್ ತಂಡದವರಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ.
15 ರಂದು ಭಾನುವಾರ
ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 2 ಗಂಟೆವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು,
ಮದ್ಯಾಹ್ನ 2 ರಿಂದ ಸಂಜೆ 4.30 ಗಂಟೆವರೆಗೆ ಪ್ರಖ್ಯಾತ ಜಿ-ಸರಿಗಮಪ ತಂಡದವರಿಂದ ಸಂಗೀತ ಕಾರ್ಯಕ್ರಮ.
ಸಂಜೆ 4.30 ರಿಂದ 6 ಗಂಟೆವರೆಗೆ ಪ್ರಖ್ಯಾತ ಕಲರ್ಸ್-ಗಿಚ್ಚಿ ಗಿಲಿಗಿಲಿ ತಂಡದವರಿಂದ ಹಾಸ್ಯ ಕಾರ್ಯಕ್ರಮ.
6 ರಿಂದ ರಾತ್ರಿ 10.30 ಗಂಟೆವರೆಗೆ ರವಿ ಬಸ್ರೂರ್ ಮತ್ತು ತಂಡದವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮಗಳು ನಡೆಯಲಿದೆ.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್,ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ,ಉಪವಿಭಾಗಾಧಿಕಾರಿ ಶಿವಮೂರ್ತಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಸಕರು ಗಗನಚುಕ್ಕಿ ಜಲಪಾತೋತ್ಸವದ ಲೋಗೋವನ್ನು ಅನಾವರಣ ಗೊಳಿಸಿದರು.