ಮನೆ ಸ್ಥಳೀಯ ನಾಡಿನಿಂದ ಕಾಡಿಗೆ ಪ್ರಯಾಣ ಬೆಳೆಸಿದ ಗಜಪಡೆ: ಮಾವುತರು ಕಾವಾಡಿಗಳಿಗೆ ಹೆಚ್ಚು ಗೌರವ ಧನ ನೀಡಿ ಬಿಳ್ಕೊಡುಗೆ

ನಾಡಿನಿಂದ ಕಾಡಿಗೆ ಪ್ರಯಾಣ ಬೆಳೆಸಿದ ಗಜಪಡೆ: ಮಾವುತರು ಕಾವಾಡಿಗಳಿಗೆ ಹೆಚ್ಚು ಗೌರವ ಧನ ನೀಡಿ ಬಿಳ್ಕೊಡುಗೆ

0

ಮೈಸೂರು: ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ನಿಭಾಯಿಸಿದ ದಸರಾ ಗಜಪಡೆ ಇಂದು ನಾಡಿನಿಂದ ಕಾಡಿಗೆ ಪ್ರಯಾಣ ಬೆಳೆಸಿವೆ.

ಕಾಡಿಗೆ ಹೊರಟ ಆನೆಗಳಿಗೆ ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡಲಾಯ್ತು. ಒಲ್ಲದ ಮನಸಿನಲ್ಲೇ ಗಜಪಡೆಗಳು ಕಾಡಿನತ್ತ ಮುಖ ಮಾಡಿದವು. ಮಾವುತರು ಕಾವಾಡಿಗಳ ಕೋರಿಕೆ ಮೇರೆಗೆ ಈ ಬಾರಿ ಅವರಿಗೆ ಹೆಚ್ಚು ಗೌರವಧನ ನೀಡಲಾಗಿದೆ. ಕಳೆದ ವರ್ಷ ತಲಾ ಹತ್ತು ಸಾವಿರ ಗೌರವ ಧನ‌‌ ನೀಡಲಾಗಿತ್ತು. ಈ ಬಾರಿ 55 ಮಂದಿಗೆ ತಲಾ 15 ಸಾವಿರ ರೂ. ಗೌರವ ಧನ ನೀಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಕೆವಿ ರಾಜೇಂದ್ರ ಹೇಳಿದ್ದಾರೆ.

ಎರಡು ತಿಂಗಳಿಂದ ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿದ್ದ ಆನೆಗಳು, ಯಶಸ್ವಿಯಾಗಿ ಜಂಬೂಸವಾರಿ ಪೂರ್ಣಗೊಳಿಸಿದ್ದವು. ನಿನ್ನೆ ವಿಶ್ರಾಂತಿ ಪಡೆದಿದ್ದ ಆನೆಗಳು, ಇಂದು ವಾಪಸ್ಸು ಕಾಡಿಗೆ ಹೊರಟವು. ಕಾಡಿಗೆ ಹೊರಟ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಲಾಯ್ತು.

ಪುರೋಹಿತರಾದ ಪ್ರಹ್ಲಾದ್, ಡಿಸಿ ಡಾ. ಕೆವಿ ರಾಜೇಂದ್ರ ಡಿಸಿಎಫ್ ಸೌರಬ್ ಕುಮಾರ್, ಪಶು ವೈದ್ಯ ಮುಜೀಬ್ ನೇತೃತ್ವದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಲಾಯ್ತು. ಪೂಜೆ ನಂತರ ಆನೆಗಳು ಮತ್ತಿಗೋಡು, ರಾಮಪುರ, ದುಬಾರೆ ಶಿಬಿರಗಳಿಗೆ ಪ್ರಯಾಣ ಬೆಳೆಸಿದವು. ಆನೆ ಜೊತೆಗೆ ಬಂದಿದ್ದ ಮಾವುತ ಕಾವಾಡಿಗಳಿಗೆ ಅರಮನೆ ಆಡಳಿತ ಮಂಡಳಿಯಿಂದ ಗೌರವಿಸಿ ಸನ್ಮಾನಿಸಿ ಬೀಳ್ಕೊಡಲಾಯ್ತು.

ಈ ಬಾರಿ ಅಭಿಮನ್ಯು ನೇತೃತ್ವದ 14 ಆನೆಗಳನ್ನ ಕರೆತರಲಾಗಿತ್ತು. ಅಭಿಮನ್ಯು, ಭೀಮಾ,ಅರ್ಜುನ, ಕಂಜನ್, ವಿಜಯ, ವರಲಕ್ಷ್ಮೀ, ಗೋಪಿ, ಸುಗ್ರೀವ, ಧನಂಜಯ, ಹಿರಣ್ಯ, ರೋಹಿತ್, ಪ್ರಶಾಂತ್, ಮಹೇಂದ್ರ, ಲಕ್ಷ್ಮೀ ಆನೆಗಳು ಮರಳಿ ಲಾರಿಗಳ ಮೂಲಕ ತಮ್ಮ ಕ್ಯಾಂಪ್ ಗೆ ತೆರಳಿದವು.