ಕ್ಯಾಮೆರಾದ ಸ್ಮಾರ್ಟ್ ಫೋನ್ ಗಳಿಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆಯಿದೆ. ಅದರಲ್ಲೂ 108 ಮೆಗಾಪಿಕ್ಸೆಲ್ ಕ್ಯಾಮೆರಾ ಫೋನ್ ಗಳು ದೇಶದಲ್ಲಿ ಎಗ್ಗಿಲ್ಲದೆ ಸೇಲ್ ಆಗುತ್ತಿದೆ. ಇವುಗಳು ಕಡಿಮೆ ಬೆಲೆಗೆ ಸಿಗುತ್ತಿರುವುದರಿಂದ ಬೇಗನೆ ಸೋಲ್ಡ್ ಔಟ್ ಆಗುತ್ತದೆ. ಇದೀಗ ದಕ್ಷಿಣ ಕೊರಿಯಾ ಮೂಲದ ಸ್ಯಾಮ್ ಸಂಗ್ ಕಂಪನಿ ಕ್ಯಾಮೆರಾ ಪ್ರಿಯರಿಗಾಗಿ ಹೊಸ ಮೊಬೈಲ್ ರಿಲೀಸ್ ಮಾಡಲು ಮುಂದಾಗಿದೆ. ಸ್ಯಾಮ್ಸಂಗ್ ತನ್ನ ಗ್ಯಾಲಕ್ಸಿ F ಸರಣಿಯ ಅಡಿಯಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಗ್ಯಾಲಕ್ಸಿ F54 5G (Galaxy F54 5G) ಸ್ಮಾರ್ಟ್ ಫೋನ್ ಅನಾವರಣ ಮಾಡಲು ತಯಾರಿ ನಡೆಸಿದೆ. ಅದ್ಭುತ ಕ್ಯಾಮೆರಾ ಫೀಚರ್ಸ್ ಇರುವ ಈ ಫೋನ್ ಇದೇ ಜೂನ್ 6ಕ್ಕೆ ಮಾರುಕಟ್ಟೆಗೆ ಅಪ್ಪಳಿಸಲಿದೆ.
ಫೀಚರ್ ಗಳ ಜೊತೆಗೆ ಗ್ಯಾಲಕ್ಸಿ F54 5G ಫೋನ್ನ ಬೆಲೆ ಕೂಡ ಆನ್ಲೈನ್ ನಲ್ಲಿ ಸೋರಿಕೆ ಆಗಿದೆ. ಮೂಲಗಳ ಪ್ರಕಾರ ಇದರ 8GB RAM ಮತ್ತು 256GB ಸ್ಟೋರೇಜ್ ಆಯ್ಕೆಗೆ 35,999 ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಈ ಸ್ಮಾರ್ಟ್ ಫೋನ್ ನ ಫೀಚರ್ಸ್ ಕೂಡ ಸೋರಿಕೆ ಆಗಿದೆ. ಕ್ಯಾಮೆರಾ ಪ್ರಿಯರಿಗೆ ಈ ಮೊಬೈಲ್ ಹೇಳಿಮಾಡಿಸಿದಂತಿದ್ದು ಅನೇಕ ಆಯ್ಕೆಗಳನ್ನು ನೀಡಲಾಗಿದೆ.
ಲೀಕ್ ಆಗಿರುವ ಮಾಹಿತಿಯ ಪ್ರಕಾರ ಗ್ಯಾಲಕ್ಸಿ F54 5G ಸ್ಮಾರ್ಟ್ ಫೋನ್ ಅಧಿಕ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರಲಿದ್ದು, 6.67 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಪಡೆದಿರಲಿದೆ. ಬಲಿಷ್ಠವಾದ ಸ್ಯಾಮ್ ಸಂಗ್ ನ Exynos 1380 ಪ್ರೊಸೆಸರ್ ಪ್ರೊಸೆಸರ್ ಬಲದಲ್ಲಿ ಕಾರ್ಯನಿರ್ವಹಿಸಲಿದ್ದು, ಇತ್ತೀಚಿಗಿನ 13 ಓಎಸ್ ಸಪೋರ್ಟ್ ಸಹ ಪಡೆದಿರಲಿದೆ. ಜೊತೆಗೆ 6GB RAM + 128GB ಮತ್ತು 8GB RAM + 256GB ಆಯ್ಕೆಗಳಲ್ಲಿ ಬರುವುದು ಬಹುತೇಕ ಖಚಿತ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿರಲಿದ್ದು, ಮುಖ್ಯ ಕ್ಯಾಮೆರಾವು ಬರೋಬ್ಬರಿ 108 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ. ಇದು ಫೋಟೋಗ್ರಫಿಗೆ ಸೂಕ್ತವಾಗಿದ್ದು ಅತ್ಯುತ್ತಮ ಕ್ವಾಲಿಟಿಯಲ್ಲಿ ವಿಡಿಯೋವನ್ನು ಸೆರೆಹಿಡಿಯುತ್ತದೆ. ಇದರಲ್ಲಿರುವ ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಪಡೆದಿರಲಿದೆ. ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿ ಇರಲಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ನೈಟೋಗ್ರಫಿ ಎಂಬ ವಿಶೇಷ ಆಯ್ಕೆ ನೀಡಾಗಿದ್ದು, ಇದರ ಮೂಲಕ ಮಂದ ಬೆಳಕಿನಲ್ಲಿ ಕೂಡ ಅತ್ಯುತ್ತಮ ಫೋಟೋ ಕ್ಲಿಕ್ಕಿಸಬಹುದು.
ಗ್ಯಾಲಕ್ಸಿ F54 5G ಫೋನ್ ದೀರ್ಘ ಸಮಯ ಬಾಳಕೆ ಬರುವ 6,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದ್ದು, ಜೊತೆಗೆ 25W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿರಲಿದೆ. ಇದು 5G ಬೆಂಬಲ ಪಡೆದುಕೊಂಡಿದೆ. ಜೊತೆಗೆ 4ಜಿ ಎಲ್ಟಿಇ, GPS, Wi-Fi 6, ಬ್ಲೂಟೂತ್ 5.2, ಮತ್ತು USB 2.0 ಟೈಪ್-C ಪೋರ್ಟ್ ಆಯ್ಕೆಗಳು ಇರಲಿವೆ. ಕಡಿಮೆ ಬೆಲೆಗೆ ಉತ್ತಮ ಕ್ಯಾಮೆರಾ, ಡೀಸೆಂಟ್ ಪ್ರೊಸೆಸರ್, ಬಿಗ್ ಬ್ಯಾಟರಿಯ ಫೋನ್ ಖರೀದಿಸುವ ಪ್ಲಾನ್ ನಲ್ಲಿ ನೀವಿದ್ದರೆ ಈ ಫೋನ್ ಗಾಗಿ ಕೆಲ ದಿನಗಳ ಕಾಲ ಕಾಯುವುದು ಉತ್ತಮ.