ಮನೆ ಮನರಂಜನೆ ಗೇಮ್ ಚೇಂಜರ್​ ಸಿನಿಮಾ ವಿಮರ್ಶೆ

ಗೇಮ್ ಚೇಂಜರ್​ ಸಿನಿಮಾ ವಿಮರ್ಶೆ

0

ಒಮ್ಮೆ ರಾಜಮೌಳಿ ಜೊತೆ ಸಿನಿಮಾ ಮಾಡಿ ಸೂಪರ್​ ಸಕ್ಸಸ್ ಕಾಣುವ ಹೀರೋಗಳು ನಂತರದ ಸಿನಿಮಾದಲ್ಲಿ ಬೇರೆ ನಿರ್ದೇಶಕರ ಜೊತೆ ಕೈ ಜೋಡಿಸಿದರೆ ಸೋಲು ಖಚಿತ ಎಂಬ ಮಾತು ಚಾಲ್ತಿಯಲ್ಲಿದೆ. ಆದರೆ ಅದನ್ನು ಸುಳ್ಳು ಮಾಡಬೇಕು ಎಂಬ ಪ್ರಯತ್ನ ಎಲ್ಲ ಹೀರೋಗಳಿಂದಲೂ ಆಗುತ್ತದೆ. ರಾಮ್ ಚರಣ್​ ನಟಿಸಿದ್ದ ‘ಆರ್​ಆರ್​ಆರ್​’ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ಚಿತ್ರದ ನಂತರ ರಾಮ್ ಚರಣ್ ಅವರ ಖಾತೆಯಿಂದ ಬಂದಿರುವ ಸಿನಿಮಾ ‘ಗೇಮ್​ ಚೇಂಜರ್​’. ಆದ್ದರಿಂದ ಈ ಸಿನಿಮಾ ಮಾಡುವಾಗ ಅವರ ಮೇಲೆ ಹೆಚ್ಚುವರಿ ನಿರೀಕ್ಷೆ ಮೂಡಿತ್ತು. ಈಗ ‘ಗೇಮ್​ ಚೇಂಜರ್​’ ಬಿಡುಗಡೆಯಾಗಿ ಪ್ರೇಕ್ಷಕರ ಎದುರು ಬಂದಿದೆ.

Join Our Whatsapp Group

ಬಿಗ್ ಬಜೆಟ್ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡ ನಿರ್ದೇಶಕ ಶಂಕರ್​ ಅವರು ‘ಗೇಮ್ ಚೇಂಜರ್​’ ಸಿನಿಮಾದಲ್ಲಿ ರಾಮ್ ಚರಣ್​ ಜೊತೆ ಕೈ ಜೋಡಿಸಿದ್ದಾರೆ. ಅವರಿಬ್ಬರ ಕಾಂಬಿನೇಷನ್​ಗೆ ನಿರ್ಮಾಪಕ ದಿಲ್ ರಾಜು ಅವರು ನೂರಾರು ಕೋಟಿ ರೂಪಾಯಿ ಬಂಡವಾಳ ಸುರಿದಿದ್ದಾರೆ. ಮೇಕಿಂಗ್ ಗುಣಮಟ್ಟದಲ್ಲಿ ಕಿಂಚಿತ್ತೂ ರಾಜಿ ಮಾಡಿಕೊಳ್ಳಲದೇ ಈ ಸಿನಿಮಾವನ್ನು ಮಾಡಲಾಗಿದೆ. ರಾಮ್ ಚರಣ್ ಅವರಿಗೆ ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರು ಇದ್ದಾರೆ. ಎರಡೂ ವರ್ಗಕ್ಕೆ ಇಷ್ಟ ಆಗುವಂತಹ ಸಿನಿಮಾವನ್ನು ಶಂಕರ್​ ಅವರು ಕಟ್ಟಿಕೊಟ್ಟಿದ್ದಾರೆ.

ರಾಮ್ ಚರಣ್ ಅವರಿಗೆ ‘ಗೇಮ್ ಚೇಂಜರ್​’ ಸಿನಿಮಾದಲ್ಲಿ ದ್ವಿಪಾತ್ರವಿದೆ. ತಂದೆಯಾಗಿ ಹಾಗೂ ಮಗನಾಗಿ ಅವರು ಕಾಣಿಸಿಕೊಂಡಿದ್ದಾರೆ. ಎರಡೂ ಪಾತ್ರಕ್ಕೂ ಅದರದ್ದೇ ಆದ ಶೇಡ್​ಗಳು ಇವೆ. ಒಂದು ಶೇಡ್​ನಲ್ಲಿ ಬಿಕ್ಕಳಿಸುತ್ತ ಮಾತನಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡ ರಾಮ್ ಚರಣ್​ ಅವರು ಇನ್ನೊಂದು ಪಾತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಮಿಂಚುತ್ತಾರೆ. ಪೊಲೀಸ್​ ಆಗಿಯೂ, ಜಿಲ್ಲಾಧಿಕಾರಿ ಆಗಿಯೂ ಗಮನ ಸೆಳೆಯುತ್ತಾರೆ.

ಅಷ್ಟೇ ಅಲ್ಲದೇ, ಲವರ್​ ಬಾಯ್ ಗೆಟಪ್​ನಲ್ಲಿ ಕೂಡ ಅಭಿಮಾನಿಗಳಿಗೆ ರಾಮ್ ಚರಣ್​ ಇಷ್ಟ ಆಗುತ್ತಾರೆ. ಅವರಿಗೆ ನಟಿ ಕಿಯಾರಾ ಅಡ್ವಾಣಿ ಜೋಡಿಯಾಗಿದ್ದಾರೆ. ಕಿಯಾರಾ ಅಡ್ವಾಣಿ ಪಾತ್ರಕ್ಕೆ ಹೆಚ್ಚು ಸ್ಕ್ರೀನ್ ಸ್ಪೇಸ್​ ಇಲ್ಲದಿದ್ದರೂ ಕಥೆಗೆ ಬಹಳ ಮಹತ್ವ ಎನಿಸುವಂತಹ ಪಾತ್ರ ಅವರದ್ದಾಗಿದೆ. ಶಂಕರ್​ ಅವರು ಎಂದಿನಂತೆ ಹಾಡುಗಳ ಮೂಲಕ ಅದ್ದೂರಿತನವನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ.

ಆ್ಯಕ್ಷನ್​ ದೃಶ್ಯಗಳಿಗೆ ಈ ಸಿನಿಮಾದಲ್ಲಿ ಯಾವುದೇ ಕೊರತೆ ಇಲ್ಲ. ಒಬ್ಬ ಜಿಲ್ಲಾಧಿಕಾರಿಗೆ ಇರುವ ಅಧಿಕಾರಗಳು ಏನು? ಆತ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು? ರಾಜಕೀಯದಲ್ಲಿ ಸರಿಯಾಗಬೇಕಿರುವ ವಿಷಯಗಳು ಏನು? ಮತದಾನ ಹೇಗೆ ನಡೆಯಬೇಕು ಎಂಬಿತ್ಯಾದಿ ಗಂಭೀರ ವಿಚಾರಗಳೇ ‘ಗೇಮ್​ ಚೇಂಜರ್​’ ಸಿನಿಮಾದ ಪ್ರಮುಖ ಟಾಪಿಕ್. ಅದನ್ನು ಸಾಧ್ಯವಾದಷ್ಟು ಮಾಸ್ ಶೈಲಿಯಲ್ಲಿ ಜನರಿಗೆ ತಲುಪಿಸಿ ಪಾಠ ಮಾಡಲು ನಿರ್ದೇಶಕ ಶಂಕರ್ ಪ್ರಯತ್ನಿಸಿದ್ದಾರೆ. ದುಡ್ಡಿಗಾಗಿ ಮತ ಮಾರಿಕೊಳ್ಳಬಾರದು ಎಂಬ ಸಂದೇಶವೂ ಈ ಚಿತ್ರದಲ್ಲಿದೆ.

​ತಿರು ಅವರ ಛಾಯಾಗ್ರಹಣ, ಎಸ್​. ಥಮನ್ ಅವರ ಸಂಗೀತದಿಂದ ‘ಗೇಮ್ ಚೇಂಜರ್​’ ಸಿನಿಮಾದ ತೂಕ ಹೆಚ್ಚಿದೆ. ಈ ಚಿತ್ರದ ಮೊದಲಾರ್ಧ ಸಾಗಿದ್ದೇ ತಿಳಿಯುವುದಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಕಥೆ ಇದ್ದಲ್ಲೇ ಗಿರಕಿ ಹೊಡೆಯುತ್ತದೆ. ನಾಯಕ ಮತ್ತು ಖಳನಾಯಕನ ನಡುವಿನ ಜಟಾಪಟಿಯಲ್ಲೇ ಸೆಕೆಂಡ್​ ಹಾಫ್ ಹೆಚ್ಚು ಮುಳುಗಿದೆ. ಕಥೆಯಲ್ಲಿ ಒಂದರಮೇಲೊಂದು ಟ್ವಿಸ್ಟ್​ಗಳು ಎದುರಾಗುತ್ತವೆಯಾದರೂ ಎಷ್ಟೋ ದೃಶ್ಯಗಳಲ್ಲಿ ಲಾಜಿಕ್ ಇಲ್ಲವೇ ಇಲ್ಲ. ಇಡೀ ಸಮಾಜವನ್ನು ಸರಿಪಡಿಸಲು ಹೊರಟ ನಾಯಕ ತನಗೆ ಎದುರಾದ ಎಲ್ಲ ಅಡೆತಡೆಗಳನ್ನು ಮ್ಯಾಜಿಕ್ ಮಾಡಿದ ರೀತಿಯಲ್ಲಿ ಸರಿಪಡಿಸಿಬಿಡುತ್ತಾನೆ. ಇಂಥ ದೃಶ್ಯಗಳಿಂದ ‘ಗೇಮ್ ಚೇಂಜರ್​’ ಸಾಧಾರಣ ಎನಿಸಿಕೊಳ್ಳುತ್ತದೆ. ಉಳಿದಂತೆ ಒಂದು ಕಮರ್ಷಿಯಲ್ ಚಿತ್ರವಾಗಿ ಎಂಜಾಯ್ ಮಾಡಬಹುದು.