ಕಲಿಯುಗದಲ್ಲೂ ಹಲವು ಪವಾಡಗಳು ನಮ್ಮ ಕಣ್ಣೆದುರೇ ಘಟಿಸಿದರೂ ವಿಚಾರವಂತಿಕೆಯ ಸೋಗಿನಲ್ಲಿ ನಾವದನ್ನು ನಂಬಲು ಸಿದ್ಧರಿರುವುದಿಲ್ಲ. ಯಾರಾದರೂ ಹೆಚ್ಚು ಒತ್ತಾಯ ಪೂರ್ವಕವಾಗಿ ಸಾಬೀತು ಪಡಿಸಲು ಹೋದರೆ ಹೀಗೂ ಉಂಟೆ ಎಂದು ಸುಮ್ಮನಾಗುತ್ತೇವೆ.
ಇಂಥ ಒಂದು ಪವಾಡ ಶ್ರೀಕಂಠನ ನೆಲೆವೀಡು ನಂಜನಗೂಡಿನಲ್ಲಿಯೂ ನಡೆದಿದೆ. ಶ್ರೀಕಂಠೇಶ್ವರನ ದೇವಾಲಯದಲ್ಲಿರುವ ನವಗ್ರಹ ಪ್ರತಿಮೆಗಳ ಪಕ್ಕದಲ್ಲಿರುವ ಕಂಬದಲ್ಲಿ ಗಣಪ ಉದ್ಭವಿಸಿದ್ದಾನೆ. ಈ ವಿಸ್ಮಯ ಕಾಣಬೇಕಾದರೆ ನೀವು ಶ್ರೀಕಂಠನ ಸನ್ನಿಧಿಗೆ ಭೇಟಿ ಕೊಡಬೇಕು.
ಈಗ್ಗೆ 30-35 ವರ್ಷಗಳ ಹಿಂದೆ ಈ ಕಂಬದಲ್ಲಿ ತುಸು ಉಬ್ಬಶಿಲ್ಪ ರೀತಿಯ ಗಣೇಶನ ಆಕಾರ ಅಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ಈಗ ಅದು ಸ್ಪಷ್ಟ ರೂಪ ತಳೆದಿದೆ. ಮೂಷಿಕನ ಮೇಲೆ ಕಾಲಿಟ್ಟು ನೃತ್ಯಭಂಗಿಯಲ್ಲಿ ನಿಂತ ಗಣಪನ ಸಂಪೂರ್ಣವಾಗಿ ಮೂರ್ತವೆತ್ತಿದ್ದಾನೆ. ಇದು ಪ್ರತಿವರ್ಷ ನಂಜನಗೂಡಿಗೆ ಹೋಗುವ ನಾನು ಕಣ್ಣಾರೆ ಕಂಡದ್ದು.
ಇದು ನನ್ನೊಬ್ಬನ ಅನುಭವವಲ್ಲ. 30-40 ವರ್ಷಗಳ ಹಿಂದಿನಿಂದ ಈ ಕಂಬದಲ್ಲಿ ಗಣಪನ ನೋಡುತ್ತಾ, ಪೂಜಿಸುತ್ತಾ ಬಂದಿರುವ ಹಲವರ ಅನುಭವವೂ ಇದೇ ಆಗಿದೆ.
ತಮ್ಮ ಈ ಅನುಭವವನ್ನು ಹಾಗೂ ತಮ್ಮ ಮನದಂತರಾಳದಲ್ಲಿ ಮೂಡಿದ ಜಿಜ್ಞಾಸೆಯನ್ನು ಹಿರಿಯ ಪತ್ರಕರ್ತ ಸಿ. ಸೀತಾರಾಂ ಅವರು ನಂಜನಗೂಡಿನ ಬಗ್ಗೆ ಬರೆದ ಪುಸ್ತಕವೊಂದರಲ್ಲಿ ದಾಖಲಿಸಿದ್ದಾರೆ. ಒಂದು ಕಾಲದಲ್ಲಿ ಕಂಬದಲ್ಲಿ ಮೂಡಿದ್ದ ಕಾಲಿಂಚು ದಪ್ಪದ ಗಣಪನ ಆಕೃತಿ ಇಂದು ಎರಡೂವರೆ ಮೂರಿಂಚಿನಷ್ಟು ಬೆಳೆದಿದೆ. ಹಿಂದೆ ಕುಂಕುಮ – ಅರಿಶಿನ ಲೇಪಿತ ಉಬ್ಬುಗಳು ಕಾಣುತ್ತಿದ್ದ ಸ್ಥಳದಲ್ಲಿ, ಶಿಲ್ಪಿಯೊಬ್ಬ ಗಣಪನ ಮೂರ್ತಿಯನ್ನು ಕೆತ್ತಿದಂತೆ ತೋರುತ್ತದೆ. ಈ ಗಣಪನಿಗೆ ಕವಚವೊಂದನ್ನು ಕೂಡ ಮಾಡಿಸಲಾಗಿತ್ತು. ಆದರೆ, ಇಂದು ಅದು ಕವಚಕ್ಕಿಂತ ಬೃಹತ್ತಾಗಿ ಬೆಳೆದಿದೆ ಎಂಬುದು ದೇವಾಲಯದ ಅರ್ಚಕರ ಆತ್ಮವಿಶ್ವಾಸದ ನುಡಿ.
ಇಂಥ ಉದ್ಬವದ ಹಲವು ವಿಚಾರಗಳನ್ನು ನಾವು ಕೇಳಿದ್ದೇವೆ. ಕೆಲವರು ಕಣ್ಣಾರೆ ಕಂಡಿದ್ದಾರೆ. ನೀವೂ ನಂಜನಗೂಡಿಗೆ ಹೋಗಿ ಈ ವಿಸ್ಮಯವನ್ನು ನೋಡಿ, ಸ್ಥಳೀಯರ ಅನುಭವ ಕೇಳಿ ಖಾತ್ರಿ ಪಡಿಸಿಕೊಳ್ಳಿ.