ಶಿವಮೊಗ್ಗ (Shivamogga): ಎರಡು ವರ್ಷಗಳ ಬಳಿಕ ಶಿವಮೊಗ್ಗದಲ್ಲಿ ಅದ್ಧೂರಿಯಿಂದ ಗಣೇಶೋತ್ಸವ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಉಂಟಾದ ವೀರ ಸಾವರ್ಕರ್ ಫ್ಲೆಕ್ಸ್ ತೆರವು ಮತ್ತು ಯುವಕನಿಗೆ ಚಾಕು ಇರಿತ ಪ್ರಕರಣದಿಂದಾಗಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಈ ನಡುವೆ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಅಹಿತಕರ ಘಟನೆಗಳು ಸಂಭವಿಸುವ ಸ್ಥಳಗಳನ್ನು ಪತ್ತೆ ಮಾಡಿರುವ ಮಹಾನಗರ ಪಾಲಿಕೆ 36 ಕಡೆಗಳಲ್ಲಿ ತಾತ್ಕಾಲಿಕವಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಪೊಲೀಸ್ ಇಲಾಖೆ ಅಳವಡಿಸಿರುವ ಕ್ಯಾಮೆರಾಗಳು ಒಳಗೊಂಡಂತೆ ಹಲವೆಡೆ ತೀವ್ರ ನಿಗಾ ಇಡಲಾಗುತ್ತಿದೆ.
ಸೆಪ್ಟೆಂಬರ್ 9ರಂದು ಕೋಟೆ ಶ್ರೀಭೀಮೇಶ್ವರ ದೇವಸ್ಥಾನದಿಂದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹೊರಡಲಿದೆ. ನಗರದಲ್ಲಿ 350ಕ್ಕೂ ಅಧಿಕ ಸಾರ್ವಜನಿಕ ಗಣಪತಿ ಮೂರ್ತಿಗಳು ಪ್ರತಿಷ್ಠಾಪನೆಗೊಂಡರೂ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ವಿಶೇಷ ಮಹತ್ವವಿದೆ. ಹಾಗಾಗಿ, ಮೆರವಣಿಗೆ ಸಾಗುವ 50 ಕಡೆ ವಾಚ್ ಟವರ್‌ಗಳು ಪಾಲಿಕೆಯಿಂದ ನಿರ್ಮಾಣಗೊಳ್ಳಲಿವೆ. ಪೊಲೀಸರು ವಾಚ್ ಟವರ್‌ಗಳ ಮೂಲಕ ಮೆರವಣಿಗೆಯ ಪೂರ್ಣ ಚಿತ್ರೀಕರಣ ಮಾಡಲಿದ್ದಾರೆ. ಕಿಡಿಗೇಡಿಗಳ ಹೆಡೆಮುರಿ ಕಟ್ಟಲು ಪೊಲೀಸರು ಸಜ್ಜಾಗಿದ್ದಾರೆ.