ಬೆಂಗಳೂರು(Bengaluru) : ಅಪ್ರಾಪ್ತೆಯ ಮೇಲೆ 8 ಜನ ನಿರಂತರ ಸಾಮೂಹಿಕ ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಏನಿದು ಘಟನೆ: ಮೊದಲು ಇಬ್ಬರು ಆರೋಪಿಗಳು 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ವಿಚಾರ ತಿಳಿಸಿದರೆ ಕೊಲೆ ಮಾಡೋದಾಗಿ ಬೆದರಿಸಿ ಕಳಿಸಿದ್ದಾರೆ. ನಂತರ ವಿಡಿಯೋ ತೋರಿಸಿ ಬೆದರಿಸಿ ಎಂಟು ಜನ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಮನೆಗೆ ಬಂದಾಗ ಅಳುತ್ತಿದ್ದ ಬಾಲಕಿಯನ್ನ ಪೋಷಕರು ಪ್ರಶ್ನಿಸಿದ್ದು, ಆರಂಭದಲ್ಲಿ ಹೆದರಿದ್ದ ಬಾಲಕಿ ಕಬಾಬ್ ಖಾರ ಇತ್ತು, ಅದ್ಕೆ ಅಳುತ್ತಿದ್ದೆ ಎಂದಿದ್ದಾಳೆ. ನಂತರ ನಿಧಾನವಾಗಿ ವಿಚಾರಿಸಿದಾಗ ವಿಚಾರ ಬಯಲಾಗಿದೆ. ತಕ್ಷಣ ಬಾಲಕಿಯ ತಾಯಿ ಏಪ್ರಿಲ್ 5ರಂದು ಯಲಹಂಕ ಠಾಣೆಗೆ ದೂರು ನೀಡಿದ್ದಾರೆ.
ಕೂಡಲೇ ಪೋಕ್ಸೋ, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಒಟ್ಟು 6 ಜನ ಆರೋಪಿಗಳನ್ನು ಬಂಧಿಸಿದ್ದರು. ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಉಳಿದ ಇಬ್ಬರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.