ಸಾಂಗ್ಲಿ : ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಭೀಕರ ಘಟನೆಯೊಂದು ನಡೆದಿದೆ. ತೃತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬರ ಮೇಲೆ ಎರಡು ಸಹಪಾಠಿಗಳು ಹಾಗೂ ಅವರ ಸ್ನೇಹಿತನು ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಈ ಭಯಾನಕ ಘಟನೆ ಮೇ 18 ರಂದು ರಾತ್ರಿ ಸಂಭವಿಸಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿಯ ಪ್ರಕಾರ, 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಆ ರಾತ್ರಿ 10 ಗಂಟೆಯ ಸುಮಾರಿಗೆ ಚಿತ್ರಮಂದಿರಕ್ಕೆ ಹೋಗುವ ಯೋಜನೆಯೊಂದಿಗೆ ತನ್ನ ಸ್ನೇಹಿತರ ಜೊತೆಗೆ ಹೊರಟಿದ್ದರು. ಆದರೆ, ಅವರು ಆಕೆಯನ್ನು ಥಿಯೇಟರ್‌ಗೆ ಕರೆದೊಯ್ಯುವ ಬದಲು ವಿಶ್ರಾಂತಿ ಪಡೆಯುವ ನೆಪದಲ್ಲಿ ಒಂದು ಫ್ಲಾಟ್‌ಗೆ ಕರೆದೊಯ್ದಿದ್ದಾರೆ. ಅಲ್ಲಿಯೇ ಆಕೆಗೆ ಬಲವಂತವಾಗಿ ಮದ್ಯ ನೀಡಲಾಗಿದ್ದು, ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ಬಳಿಕ ಆಕೆ ತಾನು ಅನುಭವಿಸಿದ ದುರ್ಘಟನೆಯನ್ನು ತನ್ನ ಪೋಷಕರಿಗೆ ವಿವರಿಸಿದ್ದಳು. ಆಕೆಯ ಪೋಷಕರು ಕೂಡಲೇ ಸಾಂಗ್ಲಿಗೆ ಬಂದು ವಿಶ್ರಂಬಾಗ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಇತರ ಆರೋಪಗಳಿಗಾಗಿ ಭಾರತೀಯ ನ್ಯಾಯ ಸಂಹಿತಾ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.














