ಶಿವಮೊಗ್ಗ: ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ತಾಯಿಗೆ ಆರೈಕೆ ಮಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿದ್ದ ನಾಲ್ವರು ಆರೋಪಿಗಳಿಗೆ ನ್ಯಾಯಾಲಯ 25 ವರ್ಷ ಕಠಿಣ ಶಿಕ್ಷೆ, ತಲಾ 1.15 ಲಕ್ಷ ರೂ. ದಂಡ ವಿಧಿಸಿದೆ.
ಮನೋಜ್, ಪ್ರಜ್ವಲ್, ವಿನಯ್, ಸಂದೀಪ್ ಶಿಕ್ಷೆಗೆ ಒಳಗಾದವರು. ಕೋವಿಡ್ ಕಾರಣಕ್ಕೆ ಮಹಿಳೆಯೊಬ್ಬರು ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಕೋಮು ಸಂಘರ್ಷ ಕಾರಣಕ್ಕೆ ನಗರದಲ್ಲಿ ಸೆಕ್ಷನ್ ಜಾರಿಯಾಗಿತ್ತು. ಊಟ, ಹಣ್ಣು, ಹಾಲು ಹತ್ತಿರದಲ್ಲಿಯೇ ಸಿಗುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು 2020ರ ಡಿಸೆಂಬರ್ 6ರಂದು ತಾಯಿಗೆ ಊಟ ತರಲು ಪರದಾಡುತ್ತಿದ್ದ ಬಾಲಕಿಯನ್ನು ಊಟ ಕೊಡಿಸುವುದಾಗಿ ಬೈಕ್ ನಲ್ಲಿ ಕೋವಿಡ್ ವಾರ್ಡ್ ಬಾಯ್ ಕರೆದೊಯ್ದು ನಂತರ ಸ್ನೇಹಿತರ ಜತೆ ಕಾರಿನಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಿ ವಾಪಸ್ ಆಸ್ಪತ್ರೆಯ ಬಳಿಯಲ್ಲಿ ಕರೆತಂದು ಬಿಟ್ಟಿದ್ದರು. ಅಲ್ಲಿದ್ದವರು ಗಮನಿಸಿ ಆಸ್ಪತ್ರೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದರು. ನಂತರ ಪ್ರಕರಣ ಸಂಬಂಧ ಕೇಸ್ ದಾಖಲಾಗಿತ್ತು.
ಪ್ರಕರಣ ವಿಚಾರಣೆ ಮುಗಿದು ಇದೀಗ ಶಿವಮೊಗ್ಗ ಪೋಕ್ಸೋ ತ್ವರಿತ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಧೀಶ ಮೋಹನ್ ಅವರು ಆರೋಪಿಗಳಿಗೆ ಸೆಕ್ಷನ್ 6 ಪೋಕ್ಸೋ ಕಾಯಿದೆ ಪ್ರಕಾರ 20 ವರ್ಷ ಕಠಿಣ ಶಿಕ್ಷೆ, 1 ಲಕ್ಷ ದಂಡ, ಸೆಕ್ಷನ್ 366 ಆರೋಪಕ್ಕೆ 3 ವರ್ಷ ಕಠಿಣ 10 ಸಾವಿರ ದಂಡ, ಸೆಕ್ಷನ್ 506 ಅರೋಪಕ್ಕೆ 2 ವರ್ಷ ಕಠಿಣ ಸಜೆ, 5 ಸಾವಿರ ದಂಡ ಸೇರಿ ತಲಾ 25 ವರ್ಷ ಶಿಕ್ಷೆ, 1.15 ಲಕ್ಷ ರೂ ದಂಡ ವಿಧಿಸಿದ್ದಾರೆ. ವಿಶೇಷ ಸರಕಾರಿ ಅಭಿಯೋಜಕರಾಗಿ ಎಸ್. ಹರಿಪ್ರಸಾದ್ ವಾದ ಮಂಡಿಸಿದ್ದರು.