ಮಂಡ್ಯ: ಪಾಂಡವಪುರ ತಾಲೂಕು ಬೇಬಿ ಬೆಟ್ಟದ ಪ್ರದೇಶದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿ ಮಂಡ್ಯದ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕೆ.ನಿರ್ಮಲ ತೀರ್ಪು ನೀಡಿದ್ದಾರೆ.
ಅಪರಾಧಿಗಳಾದ ಕೀರ್ತಿ ಆಲಿಯಾಸ್ ಕೀರ್ತಿಗೌಡ,ಕಿರಣ ಆಲಿಯಾಸ್ ಕಿರಣ್ ಗೌಡ, ಮೋಹನ್ ಗೆ ಜೀವಾವಧಿ ಶಿಕ್ಷೆ ಮತ್ತು 20 ವರ್ಷ ಜೈಲು ಶಿಕ್ಷೆ ವಿಧಿಸಿ, 2.80 ಲಕ್ಷ ರೂ.ದಂಡ ವಿಧಿಸಲಾಗಿದೆ. ಸಾಕ್ಷಾಧಾರ ಕೊರತೆ ಹಿನ್ನೆಲೆಯಲ್ಲಿ ಆರೋಪಿ ಮಂಜುನಾಥ್ ಆರೋಪ ಮುಕ್ತಗೊಂಡಿದ್ದಾನೆ. ಮೈಸೂರಿನಲ್ಲಿ 2015 ರಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡು ಕೆ.ಆರ್.ಎಸ್. ಮೇಲುಕೋಟೆ ಕರಿಘಟ್ಟ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸುತ್ತಾಡಿ ಪ್ರೀತಿ – ವಿಶ್ವಾಸ ಪಡೆದಿದ್ದ ಕೀರ್ತಿ ಅಲಿಯಾಸ್ ಕೀರ್ತಿಗೌಡ 2015 ನೇ ಅಕ್ಟೋಬರ್ 9 ರಂದು ಕಾಲೇಜಿನ ಹತ್ತಿರ ಹೋಗಿ ವಿದ್ಯಾರ್ಥಿನಿಯನ್ನು ಕೆಆರ್‌ಎಸ್ ಗೆ ಹೋಗೋಣ ಎಂದು ಬೈಕ್ ನಲ್ಲಿ ಕೂರಿಸಿಕೊಂಡು ತೆರಳಿದ್ದು, ಪಂಪ್ ಹೌಸ್ ಹತ್ತಿರದ ಡಾಬಾದಲ್ಲಿ ಊಟ ಮಾಡಿಕೊಂಡು ಕೆ.ಆರ್.ಎಸ್ ಗೆ ಹೋಗುವ ಮಾರ್ಗದಲ್ಲಿ ಚಿತಾವಣೆ ಮಾಡಿ ಬೇಬಿ ಬೆಟ್ಟದ ತಪ್ಪಲಿಗೆ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಮಾಡಿದ್ದು,ಅದೇ ಸ್ಥಳದಲ್ಲಿ ಈತನ ಸ್ನೇಹಿತರಾದ ಕಿರಣ ಅಲಿಯಾಸ್ ಕಿರಣ್ ಗೌಡ, ಮೋಹನ ಮತ್ತು ಮಂಜುನಾಥ್ ರಸ್ತೆಯಲ್ಲಿ ನಿಂತಿದ್ದು, ನಂತರ ಕಿರಣ ಮತ್ತು ಮೋಹನ್ ಸಹ ಸಂತ್ರಸ್ತೆ ಮೇಲೆ ಅತ್ಯಾಚಾರ ಮಾಡಿದ್ದು, ಸಂತ್ರಸ್ತೆ ಅಳುವೂ ಹೆಚ್ಚಾದಾಗ ಮಂಜುನಾಥ್ ಸುಮ್ಮನಾಗಿದ್ದನು. ಅನಂತರ ನಾಲ್ವರು ಸಂತ್ರಸ್ತೆಯನ್ನು ಶ್ರೀರಂಗಪಟ್ಟಣದ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದು ಬಿಟ್ಟು ಪರಾರಿಯಾಗಿದ್ದರು.
ಸಂತ್ರಸ್ತೆ ಅ.10 ರಂದು ಪಾಂಡವಪುರ ಠಾಣೆಗೆ ದೂರು ನೀಡಿದ್ದರು.ಪ್ರಕರಣದ ತನಿಖೆ ನಡೆಸಿದ ಶ್ರೀರಂಗಪಟ್ಟಣ ಉಪವಿಭಾಗದ ಡಿ.ವೈ.ಎಸ್.ಪಿ ಎನ್.ಸಿದ್ದೇಶ್ವರ್ ಆರೋಪಿಗಳ ವಿರುದ್ಧ ಮಂಡ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.ನಂತರ ಸದರಿ ಮೊಕದ್ದಮೆಯು 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆ ಯಾಗಿತ್ತು, ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೀರ್ತಿ ಆಲಿಯಾಸ್ ಕೀರ್ತಿಗೌಡ, ಕಿರಣ್ ಅಲಿಯಾಸ್ ಕಿರಣ್ ಗೌಡ ಮತ್ತು ಮೋಹನ್ ಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆಯಡಿ ಜೀವಾವಧಿ ಶಿಕ್ಷೆ ಮತ್ತು ತಲಾ ರೂ.50,000 ದಂಡ, ಪಿ.ಓ.ಎ ಕಾಯ್ದೆ ಅಡಿ ಕಠಿಣ ಶಿಕ್ಷೆ ಮತ್ತು ಭಾದಂಸಂ ಕಲಂ 376 ಡಿ ಅಡಿಯಲ್ಲಿ ಇಪ್ಪತ್ತು ವರ್ಷ ಕಠಿಣ ಶಿಕ್ಷೆ ಮತ್ತು ರೂ.40,000 ದಂಡ ಹಾಗೂ ಭಾದಂಸಂ ಕಲಂ 506 ರಡಿಯಲ್ಲಿ ರೂ.5,000 ದಂಡ ಮತ್ತು ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ನಿರ್ಮಲ ತೀರ್ಪು ನೀಡಿದ್ದಾರೆ.
ಇದೇ ವೇಳೆ ನೊಂದ ಸಂತ್ರಸ್ತೆಗೆ 2,80,000 ರೂ ಪರಿಹಾರ ನೀಡಬೇಕೆಂದು ಆದೇಶ ಮಾಡಿರುತ್ತಾರೆ,ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಚ್.ಸಿ.ರಾಮಲಿಂಗೇಗೌಡ ವಾದ ಮಂಡಿಸಿದರು.