ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು ಎರಡು ತಿಂಗಳು ಕಳೆದರೂ ಇನ್ನೂ ಎಫ್ಐಆರ್ ದಾಖಲಿಸದ ಕಾರಣ ನೊಂದು ತಂದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಜಲೌನ್ ನಲ್ಲಿ ನಡೆದಿದೆ.
ವಿವರಗಳ ಪ್ರಕಾರ, ಅದೇ ಗ್ರಾಮದ ಪುರುಷರ ಗುಂಪೊಂದು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದೆ. ಇದಲ್ಲದೆ, ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಬಾಲಕಿಗೆ ಬೆದರಿಕೆ ಹಾಕಿದ್ದರು. ಪಂಜಾಬ್ ನಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ತಂದೆ, ಬಾಲಕಿಯು ತನಗಾಗಿರುವ ಸಂಕಟವನ್ನು ವಿವರಿಸಿದ ನಂತರ ತನ್ನ ಊರಿಗೆ ಬಂದನು.
ದೂರು ದಾಖಲಿಸಿಕೊಳ್ಳಲು ತಂದೆ ಮತ್ತು ಮಗಳು ಇಬ್ಬರೂ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಆದರೆ, ಆ ವ್ಯಕ್ತಿಯನ್ನು ಬೇರೊಂದು ಪ್ರಕರಣದಲ್ಲಿ ಸಿಲುಕಿಸುವುದಾಗಿ ಹೇಳಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಅವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಆರೋಪಿಗಳ ವಿರುದ್ಧ ಯಾವುದೇ ದೂರು ದಾಖಲಾಗದ ತಿಂಗಳ ನಂತರ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಂದೆ ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾರೆ. ಇದೇ ವೇಳೆ ಮೃತನ ಸಂಬಂಧಿಕರು ಹಾಗೂ ನೆರೆಹೊರೆಯವರು ಪ್ರತಿಭಟನೆ ನಡೆಸಿ, ಪ್ರಕರಣದ ಬಗ್ಗೆ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಘಟನೆಯ ನಂತರ ಸ್ಥಳಕ್ಕೆ ಆಗಮಿಸಿದ ಜಲೌನ್ ಎಎಸ್ಪಿ ಅಸೀಮ್ ಚೌಧರಿ ಆರೋಪಿ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.