ಗಂಗಾವತಿ (ಕೊಪ್ಪಳ ಜಿಲ್ಲೆ): ಇಲ್ಲಿನ ವಾರ್ಡ್ ಸಂಖ್ಯೆ 28ರ ವ್ಯಾಪ್ತಿಯ ಬಸ್ ಡಿಪೋ ರಸ್ತೆಯಲ್ಲಿನ ತಾತ ಕಿರಾಣಿ ಅಂಗಡಿ ಬಳಿಯ ಮನೆಯೊಂದರಲ್ಲಿ ಸಿಲಿಂಡರ್ ಗ್ಯಾಸ್ ಸ್ಫೋಟಗೊಂಡು ವಿದ್ಯುತ್ ಶಾರ್ಟ್ ಸರ್ಕಿಟ್ ಕೂಡ ಆಗಿದ್ದರಿಂದ ಐವರು ಮಹಿಳೆಯರು ಗಾಯಗೊಂಡಿದ್ದಾರೆ. ಅವರನ್ನು ಇಲ್ಲಿನ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರುತಿ ಐಲಿ, ಭಾಗ್ಯಮ್ಮ, ಶೋಭಾ ಹಾಗೂ ಪ್ರೀತಿ ಗಾಯಗೊಂಡಿದ್ದು, ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ. ಸ್ಫೋಟದಿಂದ ಕೈ, ಕಾಲು, ಮುಖಗಳಿಗೆ ಸುಟ್ಟ ಗಾಯಗಳಾಗಿವೆ.
ಬೆಳಿಗ್ಗೆ ಮನೆಯಲ್ಲಿ ಸಿಲೆಂಡರ್ ಸೋರಿಕೆಯಾಗಿತ್ತು. ಮನೆಯಲ್ಲಿ ಹಚ್ಚಿದ ದೀಪದ ಬೆಂಕಿ ಆಕಸ್ಮಿಕವಾಗಿ ತಗುಲಿ ಸ್ಫೋಟಗೊಂಡಿದೆ. ಜೊತೆಗೆ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಕೂಡ ಸಂಭವಿಸಿದೆ.
ಶ್ರುತಿ ಎನ್ನುವ ಮಹಿಳೆ ಅಪಾಯಕ್ಕೆ ಸಿಲುಕಿದಾಗ ನೆರೆ ಮನೆಯ ಮಹಿಳೆಯರು ರಕ್ಷಿಸಲು ಮನೆಗೆ ನುಗ್ಗಿದ್ದು ಅವರಿಗೂ ಸಹ ಬೆಂಕಿ ತಗುಲಿದೆ. ಈ ಅವಘಡದಿಂದ ಮನೆಯಲ್ಲಿ ಬಟ್ಟೆ, ದವಸ, ಧಾನ್ಯ, ಪಿಠೋಪಕರಣಗಳು ಸೇರಿ ಅಸ್ತಿಗೆ ಹಾನಿಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಮನೆಯ ಅಕ್ಕಪಕ್ಕದವರು ಆಂಬುಲೆನ್ಸ್‌ಗೆ ಕರೆ ಮಾಡಿ ಗಾಯಾಳುಗಳನ್ನು ಉಪವಿಭಾಗ ಆಸ್ಪತ್ರೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ನಗರಸಭೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಅಗ್ನಿಶಾಮಕದಳ ಸಿಬ್ಬಂದಿ ರಮೇಶ ಈಡಿಗೇರ, ಸುರೇಶ ಎಸ್. ಗೌಡ, ರಂಗನಾಥ, ನಗರಸಭೆ ಪರಿಸರ ಎಂಜಿನಿಯರ್ ಚೇತನಕುಮಾರ, ಆರೋಗ್ಯ ನಿರೀಕ್ಷಕ ನಾಗರಾಜ, ನಗರಸಭೆ ಸದಸ್ಯ ಎಫ್. ರಾಘವೇಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.














