ಅದ್ಧೂರಿಯಾದ ಮೇಕಿಂಗ್ ಹಾಗೂ ಟೈಟಲ್ ಟೀಸರ್ ಮೂಲಕವೇ ಸದ್ದು ಮಾಡಿರುವ ನೈಜ ಘಟನೆ ಆಧಾರಿತ ‘ಗೌಳಿ’ ಸಿನಿಮಾ, ಬಿಡುಗಡೆಗೆ ಸಜ್ಜಾಗುತ್ತಿದೆ.
ನಟ ಶ್ರೀನಗರ ಕಿಟ್ಟಿ ವಿಭಿನ್ನವಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಟ್ರೇಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲೇ ಚಿತ್ರತಂಡವು ಸುದ್ದಿಯೊಂದನ್ನು ಹಂಚಿಕೊಂಡಿದೆ. ಚಿತ್ರದ ತೆಲುಗು ಡಬ್ಬಿಂಗ್ ಹಕ್ಕು ಹಾಗೂ ಚಿತ್ರಮಂದಿರಗಳ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಈ ವಿಚಾರವನ್ನು ಖುಷಿಯಿಂದ ಹಂಚಿಕೊಂಡಿರುವ ನಿರ್ಮಾಪಕ ರಘು ಸಿಂಗಂ ಸದ್ಯದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.
ಟ್ರೇಲರ್ ರಿಲೀಸ್ ಸಮಯದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಿಸುತ್ತೇವೆ ಎಂದಿದ್ದಾರೆ ರಘು.
ಸೂರಾ ಎಸ್. ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ರಗಡ್ ಲುಕ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್’ನಲ್ಲಿ ಈ ರೀತಿ ಕಾಣಿಸಿಕೊಂಡರೂ, ಕಥಾಹಂದರದಲ್ಲಿ ಕಿಟ್ಟಿ ಫ್ಯಾಮಿಲಿ ಮ್ಯಾನ್ ಪಾತ್ರದಲ್ಲಿದ್ದಾರೆ.
ಚಿತ್ರದ ನಾಯಕಿ ಪಾವನಾ ಗೌಡ ಮೊದಲ ಬಾರಿಗೆ ಗ್ರಾಮೀಣ ಮಹಿಳೆಯಾಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ ಹೀಗೆ ಹತ್ತಾರು ಕಲಾವಿದರು ನಟಿಸಿದ್ದಾರೆ.














