ಹೊಸದಿಲ್ಲಿ: ಕಾಂಗ್ರೆಸ್ ಪಕ್ಷವನ್ನು ತೊರೆದ ಕೆಲವೇ ಗಂಟೆಗಳಲ್ಲಿ ಗೌರವ್ ವಲ್ಲಭ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
2024 ರ ಲೋಕಸಭಾ ಚುನಾವಣೆಗೆ ಮುನ್ನ ವಲ್ಲಭ್ ಅವರು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಅದರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಸೇರಿದರು.
ಇಂದು ಬೆಳಗ್ಗೆ, ಗೌರವ್ ವಲ್ಲಭ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ರಾಜೀನಾಮೆ ಪತ್ರವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಪಕ್ಷವು ಸಾಗುತ್ತಿರುವ ದಿಕ್ಕಿಲ್ಲದ ಹಾದಿಯಿಂದ ನನಗೆ ನೆಮ್ಮದಿಯಿಲ್ಲ ಎಂದು ಹೇಳಿದ್ದಾರೆ.
ಎರಡು ಪುಟಗಳ ಪತ್ರದಲ್ಲಿ, ಮಾಜಿ ಕಾಂಗ್ರೆಸ್ ವಕ್ತಾರರು ಆರ್ಥಿಕ ವಿಷಯಗಳಲ್ಲಿ ಕಾಂಗ್ರೆಸ್‌ನ ನಿಲುವು “ಯಾವಾಗಲೂ ದೇಶದ ಸಂಪತ್ತು ಸೃಷ್ಟಿಕರ್ತರನ್ನು ಅವಮಾನಿಸುವುದು ಮತ್ತು ದುರುಪಯೋಗಪಡಿಸಿಕೊಳ್ಳುವುದು” ಎಂದು ಆರೋಪಿಸಿದ್ದಾರೆ.
“ಇಂದು, ನಾವು ಆ ಆರ್ಥಿಕ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ (ಎಲ್ ಪಿಜಿ) ನೀತಿಗಳ ವಿರುದ್ಧ ತಿರುಗಿಬಿದ್ದಿದ್ದೇವೆ, ಇದಕ್ಕಾಗಿ ಪ್ರಪಂಚವು ನಮಗೆ ದೇಶದಲ್ಲಿ ಜಾರಿಗೆ ತಂದ ಕೀರ್ತಿಯನ್ನು ನೀಡಿದೆ. ನಮ್ಮ ದೇಶದಲ್ಲಿ ವ್ಯಾಪಾರ ಮಾಡುವ ಮೂಲಕ ಹಣ ಸಂಪಾದಿಸುವುದು ತಪ್ಪೇ?” ಎಂದು ಅವರು ಬರೆದಿದ್ದಾರೆ.
2023ರ ರಾಜಸ್ತಾನ ಚುನಾವಣೆಯಲ್ಲಿ ಗೌರವ್ ವಲ್ಲಭ್ ಅವರು ಉದಯ್ ಪುರ ಕ್ಷೇತ್ರದಿಂದ ಸ್ಪರ್ಧೆ ನಡೆಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲನುಭವಿಸಿದ್ದರು.